ಚಾಮರಾಜನಗರ: ರಿಲ್ಯಾಕ್ಸ್ ಮೂಡ್‌ಗೆ ಜಾರಿದ "ವ್ಯಾಘ್ರ" ಫ್ಯಾಮಿಲಿ-ವಿಡಿಯೋ ಭಾರೀ ವೈರಲ್
ಚಾಮರಾಜನಗರ, ಮೇ, 30: ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕ್ಯಾಮರಾಗೆ ಹುಲಿ ಕುಟುಂಬ ರಿಲ್ಯಾಕ್ಸ್ ಮೂಡ್‌ಗೆ ಜಾರಿರುವ ದೃಶ್ಯ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಬಂಡೀಪುರದ ಸಫಾರಿ ಜೋನಿನ ಬಾರ್ಡರ್ ರೋಡ್ ಎಂಬಲ್ಲಿ ತೊರೆ ಸಮೀಪ ಹುಲಿ ಕುಟುಂಬ ಜಾಲಿ ನಿದ್ರೆಗೆ ಜಾರಿದ ವೀಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದು, ಈ ದೃಶ್ಯಗಳು ಭಾರೀ ವೈರಲ್ ಆಗುತ್ತಿವೆ.

ತಾಯಿ ಹುಲಿ ಹಾಗೂ ಎರಡು ಮರಿ ಹುಲಿಗಳು ಮಲಗಿ ನಿದ್ರಿಸುತ್ತಿದ್ದರೆ, ಗಂಡು ಹುಲಿ ಎಚ್ಚರವಾಗಿ ಅತ್ತಿತ್ತ ಕಣ್ಣಾಡಿಸುವುದು ಸೆರೆಯಾಗಿದೆ. ಒಟ್ಟಿನಲ್ಲಿ ಟೈಗರ್ ಫ್ಯಾಮಿಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ರೋಮಾಂಚಿತರಾಗಿದ್ದಾರೆ. ಮತ್ತ ಕೆಲವರು ಭಯಗೊಂಡ ಘಟನೆಯೂ ನಡೆದಿದೆ.
ಅಮ್ಮನಿಗಾಗಿ ಹಾತೊರೆಯುತ್ತಿದೆ ಚಿರತೆ ಮರಿ: ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬವರ ಕಬ್ಬಿನ ಗದ್ದೆಯಲ್ಲಿ ತನ್ನ ಮರಿ ಬಿಟ್ಟು ಚಿರತೆ ಓಡಿ ಹೋಗಿದ್ದು, ಎರಡನೇ ದಿನವೂ ತಾಯಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ.
ಗುರುವಾರ (ಮೇ 30) ಮಧ್ಯಾಹ್ನ ಮರಿ ಚಿರತೆಯು ತಾಯಿಗಾಗಿ ಹಾತೊರೆಯುತ್ತಿದ್ದ ದೃಶ್ಯ ಕಂಡುಬಂದಿತು. ಬೇಟೆ ಹುಡುಕಿಕೊಂಡು ತಾಯಿ ಚಿರತೆ ತೆರಳಿರುವ ಸಾಧ್ಯತೆಯಿದ್ದು, ಮರಿಗಾಗಿ ವಾಪಾಸ್ ಬರಲಿದೆ ಎಂಬ ಖಚಿತತೆಯೊಂದಿಗೆ ಅರಣ್ಯ ಇಲಾಖೆ ಬೋನಿರಿಸಿದೆ. ಇನ್ನು, ಚಿರತೆ ಮರಿ ಪತ್ತೆಯಾಗಿರುವುದರಿಂದ ಜಮೀನುಗಳಿಗೆ ರೈತರು ತೆರಳು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷ: ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿಬಿಟ್ಟಿದೆ. ಹಾಗೆಯೇ ಇದೀಗ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಚಿರತೆಯೊಂದು ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಕಾಲ್ಕಿತ್ತಿರುವ ಘಟನೆ ತಾಲೂಕಿನ ಪರಮಾಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಪರಮಾಪುರ ಗ್ರಾಮದ ಶಂಭುಲಿಂಗಪ್ಪ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಹೊರ ಬಂದಿದೆ. ಇದನ್ನು ಕಂಡ ಮಾಲೀಕರು ಹಾಗು ಕೆಲಸಗಾರರು ಗಾಬರಿಗೊಂಡು ಕಬ್ಬು ಕಟಾವು ನಿಲ್ಲಿಸಿ ಜಮೀನಿನಿಂದ ಹೊರ ಬಂದಿದ್ದಾರೆ.
ಮಾಹಿತಿಯನ್ನು ಮಾಲೀಕರು ಅರಣ್ಯಾಧಿಕಾರಿಗಳಿಗೆ ತಿಳಿಸಿದ ಮೇರೆಗೆ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ಶಂಭುಲಿಂಗಪ್ಪ ಜಮೀನಿಗೆ ಬೋನ್ ತಂದಿರಿಸಿದ್ದಾರೆ. ಜೊತೆಗೆ ಸುತ್ತಮುತ್ತಲ ಪ್ರದೇಶದಲ್ಲು ಕೂಂಬಿಂಗ್ ನಡೆಸಿದ್ದು, ಚಿರತೆ ಸುಳಿವು ಪತ್ತೆಯಾಗಿಲ್ಲ.
ಚಿರತೆ ಸೆರೆಗೆ ಒತ್ತಾಯ: ಪರಮಾಪುರ ಭಾಗದಲ್ಲಿ ಚಿರತೆ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಕಬ್ಬಿನ ಗದ್ದೆಯಿಂದ ಓಡಿ ಹೋಗಿದೆ. ಇದರಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಶೀಘ್ರದಲ್ಲಿ ಚಿರತೆ ಸೆರೆಗೆ ಮುಂದಾಗಬೇಕು ಎಂದು ರೈತ ಮಹದೇವಪ್ಪ ಒತ್ತಾಯಿಸಿದ್ದಾರೆ.












Click it and Unblock the Notifications