ಗುಂಡ್ಲುಪೇಟೆ ಬಳಿ ಅರಣ್ಯ ಸಿಬ್ಬಂದಿ ಕೈ ಕಚ್ಚಿ ಪರಾರಿಯಾದ ಹುಲಿ
ಚಾಮರಾಜನಗರ, ಫೆಬ್ರವರಿ 02 : ಹುಲಿ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿಬೆಟ್ಟ ವಲಯದ ಹಿರೀಕೆರೆ ಸಮೀಪ ಹುಲಿಯೊಂದು ಕಾಣಿಸಿಕೊಂಡಿತ್ತಲ್ಲದೆ, ಮುದುಕಪ್ಪ ಎಂಬುವರ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಈ ಸಂದರ್ಭ ಅಕ್ಕಪಕ್ಕದ ಜಮೀನುಗಳ ರೈತರು ಕಲ್ಲು ತೂರಿ ಹುಲಿಯನ್ನು ಓಡಿಸಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಹುಲಿಯ ಹುಡುಕಾಟ ನಡೆಸಿದ್ದು, ಈ ವೇಳೆ ಹುಲಿ ಸುಳಿವು ಪತ್ತೆಯಾಗಲಿಲ್ಲ. ಹೀಗಾಗಿ ಅದರ ಸೆರೆಗೆ ಬೋನು ಅಳವಡಿಸಲು ಹೆಜ್ಜೆಯ ಜಾಡು ಹುಡುಕುವ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ ಮುಂದಾಗಿತ್ತು.

ಸೆರೆ ಹಿಡಿಯುವ ಸಲುವಾಗಿ, ಹುಲಿ ಕಾಡಿಗೆ ಹಿಂದಿರುಗಿರುವ ಬಗ್ಗೆ ಖಚಿತಪಡಿಸಿಕೊಂಡು, ಬೋನು ಅಳವಡಿಸಿ ವಾಪಸ್ ತೆರಳುತ್ತಿದ್ದಾಗ ಅರಣ್ಯ ವೀಕ್ಷಕ ರಾಮು ಎಂಬುವರ ಮೇಲೆ ಎರಗಿದ್ದು ಈ ಸಂದರ್ಭ ಅವರು ಜೋರಾಗಿ ಕಿರುಚಿದ್ದಾರೆ. ಆಗ ಅವರ ಕೈಯನ್ನು ಕಚ್ಚಿ ಪೊದೆಗಳತ್ತ ಓಡಿಹೋಗಿದೆ.
ಕೂಡಲೇ ಗಾಯಾಳುವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸುತ್ತಮುತ್ತಲಿನ ಜನ ಆಗಮಿಸಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸ್ ರಕ್ಷಣೆ ಪಡೆಯಲಾಯಿತು. ಹುಲಿ ಗ್ರಾಮದ ವ್ಯಾಪ್ತಿಯಲ್ಲೇ ಅಡಗಿ ಕುಳಿತಿರುವ ಸಾಧ್ಯತೆ ಇರುವುದರಿಂದ ಸೆರೆ ಹಿಡಿಯಲು ನಾಗರಹೊಳೆಯಿಂದ ಸಾಕಾನೆಗಳನ್ನು ಕರೆಯಿಸಿ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು, ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ ಸೇರಿದಂತೆ ಹುಲಿ ಸಂರಕ್ಷಣಾ ವಿಶೇಷ ದಳದ ಸಿಬ್ಬಂದಿ ತೆರಳಿದ್ದರು.

ಮೈಸೂರು ಜಿಲ್ಲೆಯಲ್ಲಿ ಕೂಡ ಹುಲಿಯ ಉಪಟಳ ಹೆಚ್ಚಾಗಿದ್ದು, ಮೂವರನ್ನು ಸಾಯಿಸಿದ್ದ ಹುಲಿಯನ್ನು ಹೆಗ್ಗಡೆ ದೇವನ ಕೋಟೆಯ ಬಳಿ ಶುಕ್ರವಾರ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹುಲಿ ಜೀವಂತ ಸೆರೆ ಸಿಗದಿದ್ದರೆ ಗುಂಡಿಟ್ಟು ಕೊಲ್ಲುವಂತೆ ಜಿಲ್ಲಾಡಳಿತ ಆದೇಶಿಸಿತ್ತು.












Click it and Unblock the Notifications