Gopalswami Hill: ಸ್ವರ್ಗದಂತಹ ಅನುಭವ ಪಡೆಯಬೇಕೆ.? ಈ ಬೆಟ್ಟಕ್ಕೆ ಭೇಟಿ ನೀಡಿ
ಚಾಮರಾಜನಗರ, ಜುಲೈ, 15: ಇದೀಗ ರಾಜ್ಯಾದ್ಯಂತ ಮುಂಗಾರು ಮಳೆ ಶುರುವಾಗಿದ್ದು, ಪ್ರವಾಸಿ ತಾಣಗಳು ಅಚ್ಚಹಸಿರಿನಿಂದ ಕಂಗೊಳಿಸುತ್ತಿವೆ. ಈ ಹಿನ್ನೆಲೆ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡೇ ಹರಿದುಬರುತ್ತಿವೆ. ಹಾಗೆಯೇ ಮಾನ್ಸೂನ್ ಮಳೆ ನಡುವೆಯೂ ಹಿಮ ಆಸ್ವಾದಿಸಬೇಕಾದರೇ, ಆಧ್ಯಾತ್ಮಿಕತೆಯಲ್ಲಿ ಮಿಂದೇಳಬೇಕಾದರೆ ಇದಕ್ಕಿಂತ ಮತ್ತೊಂದು ಯಾತ್ರಸ್ಥಳ ಇಲ್ಲ. ಹಾಗಾದರೆ ಅದು ಯಾವ ಸ್ಥಳ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮುಂಗಾರು ಅವಧಿ ಮತ್ತಷ್ಟು ಹಿಮ ಹೊತ್ತು ತರುತ್ತಿದ್ದು, ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಹಿಮಾವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ತುಂತುರು ಮಳೆ ಆಗಾಗ್ಗೆ ಆಗುತ್ತಿರುವ ಹಿನ್ನೆಲೆ ಸದಾ ಈಗ ಹಿಮಾವೃತ ಪರಿಸರ ಕಣ್ತುಂಬಿಕೊಳ್ಳಬಹುದಾಗಿದ್ದು, ಮಧ್ಯಾಹ್ನ 12 ಗಂಟೆಯಾದರೂ ಮುಂಜಾನೆ 6ರಂತೆ ಪರಿಸರ ಗೋಚರಿಸುತ್ತಿದೆ. ಅಂದಹಾಗೆ, ಗುಂಡ್ಲುಪೇಟೆ ಮತ್ತು ಬೆಟ್ಟದ ತಪ್ಪಲಿನಿಂದ ಬಸ್ ಸೌಕರ್ಯವಿದ್ದು, ವಾರಾಂತ್ಯದಲ್ಲಿ ಹೆಚ್ಚುವರಿ ಬಸ್‌ಗಳು ಕೂಡ ಸಂಚರಿಸಲಿದೆ. ಅದೃಷ್ಟ ಇದ್ದರೆ, ಬಸ್‌ನಲ್ಲಿ ಬೆಟ್ಟ ಹತ್ತುವಾಗ ಹುಲಿ, ಚಿರತೆ ದರ್ಶನವೂ ಆಗಲಿದೆ.
ಗೋಪಾಲಸ್ವಾಮಿ ಹತ್ತಾರು ಊರುಗಳ ಆರಾಧ್ಯ ದೈವ ಆಗಿದ್ದು, ಆಧ್ಯಾತ್ಮಿಕ ನೆಲೆಗಟ್ಟಿನಲ್ಲೂ ಈ ದೇವಾಲಯ ಪುರಾಣ ಪ್ರಸಿದ್ಧವಾಗಿದೆ.
ಕಬಿನಿ ಹೊರಹರಿವು ಹೆಚ್ಚಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ನದಿ, ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೊಂದೆಡೆ ಕೆಲವು ಪ್ರಮುಖ ಜಲಾಶಯಗಳ ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ, ಮುಂಜಾಗ್ರತಾ ಕ್ರಮವಾಗಿ ನೀರನ್ನು ಹೊರಹರಿಸಲಾಗುತ್ತಿದೆ. ಹಾಗೆಯೇ ಕಬಿನಿ ಹೊರಹರಿವು ಹೆಚ್ಚಳ ಹಿನ್ನೆಲೆ ಭರಚುಕ್ಕಿ ಫಾಲ್ಸ್ ಮೈದುಂಬಿ ಧುಮ್ಮಿಕ್ಕುತ್ತಿದೆ.
ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿ, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಭರಚುಕ್ಕಿ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ.
ಸೋಮವಾರ (ಜುಲೈ 15) ಮಧ್ಯಾಹ್ನ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ದುಮ್ಮಿಕ್ಕುವ ದೃಶ್ಯ ವೈಭವವು ನೋಡುಗರನ್ನು ರೋಮಾಂಚನಗೊಳಿಸಿತು. ಕಬಿನಿಯಿಂದ 20,000 ಕ್ಯೂಸೆಕ್ ಹೊರಹರಿವು ಇದ್ದು, ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.












Click it and Unblock the Notifications