ಬಸ್ ಹತ್ತುವಾಗ ಹುಡುಗಿ ಪಕ್ಕ ನಿಂತಿದ್ದ ವ್ಯಕ್ತಿಗೆ ಮನಬಂದಂತೆ ಥಳಿಸಿದ ಯುವಕರು: ದೂರು ದಾಖಲು
ಚಾಮರಾಜನಗರ, ಜೂನ್ 22: ಹುಡುಗಿ ಪಕ್ಕ ನಿಂತಿದ್ದೀಯಾ ಎಂದು ಆಕ್ರೋಶಗೊಂಡ ಯುವಕರ ದಂಡು ವ್ಯಕ್ತಿಯೊಬ್ಬರ ಬಟ್ಟೆ ಹರಿದು, ಚಪ್ಪಲಿಯಲ್ಲಿ ಹೊಡೆದು ಮನಬಂದಂತೆ ಮಾಡಿ ಹಲ್ಲೆ ನಡೆಸಿರುವ ಘಟನೆ ಗುಂಡ್ಲುಪೇಟೆ ಹಂಗಳ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ನಾಗೇಶ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಹಲ್ಲೆಯ ತೀವ್ರತೆಗೆ ಚಾಮರಾಜನಗರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್, ಗೋಪಾಲ ಹಾಗೂ ತೇಜು ಎನ್ನುವವರ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಲ ಗ್ರಾಮದ ನಾಗೇಶ್ ಮತ್ತು ಅವರ ತಾಯಿಗೆ ಹುಷಾರಿಲ್ಲದ ಕಾರಣ ತಾಲೂಕಿನ ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದ ಬಳಿಕ ಮಂಗಲದ ಬಸ್‌ಗೆ ಹೋಗಲು ಹಂಗಳ ಬಸ್ ನಿಲ್ಲುವ ಸ್ಥಳಕ್ಕೆ ಬಂದು ನಿಂತಿದ್ದಾರೆ. ನಾಗೇಶ್ ಮತ್ತು ಅವರ ತಾಯಿ ಬಸ್ ಹತ್ತಲು ನಿಂತ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾಗೇಶ್ ಪಕ್ಕ ನಿಂತಿದ್ದನ್ನು ಕಂಡು ಸಹಿಸಿದ ಯುವಕರು ರೊಚ್ಚಿಗೆದ್ದು ನಾಗೇಶ್ ಅವರ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ನಾಲ್ಕು ಆರೋಪಿಗಳೊಂದಿಗೆ ಇತರರು ನಾಗೇಶ್ ಮೇಲೆ ಹಲ್ಲೆಯ ಜೊತೆಗೆ ಚಪ್ಪಲಿಯಲ್ಲಿ ಹೊಡೆದಿದ್ದು, ಹಲ್ಲೆ ನಡೆಸುವ ವೇಳೆ ಯುವಕರ ಗುಂಪಿನಲ್ಲಿ ಓಬ್ಬಾತ ಬ್ಲೇಡ್‌ನಿಂದ ಮುಖಕ್ಕೆ ಚುಚ್ಚಲು ಮುಂದಾದಾಗ ನಾಗೇಶ್ ತನ್ನ ಕೈ ಅಡ್ಡ ಹಾಕಿದ್ದಾರೆ. ಈ ವೇಳೆ ಕೈ ಬೆರಳುಗಳಿಗೆ ಗಾಯಗಳಾಗಿವೆ.
ಹಾಡಹಗಲೇ ಯಾವುದೇ ಕಾರಣ ಇಲ್ಲದೇ ವ್ಯಕ್ತಿ ಮೇಲೆ ಯುವಕರು ಮನಬಂದಂತೆ ಹಲ್ಲೆ ಮಾಡಿರುವುದು ಆತಂಕಕಾರಿಯಾಗಿದೆ. ಹೀಗಾಗಿ ಗುಂಡ್ಲುಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಿದ್ದಾರೆ.

ಜಿಂಕೆ ಚರ್ಮ ಸಾಗಾಟ: ಆರೋಪಿಗಳ ಬಂಧನ
ಚಾಮರಾಜನಗರ: ಜಿಂಕೆ ಚರ್ಮವನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಸಮೀಪ ಬಂಧಿಸಲಾಗಿದೆ. ಮಾದಯ್ಯ(40) ಹಾಗೂ ಮಹದೇವ ನಾಯಕ (51) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಜಿಂಕೆ ಚರ್ಮ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಜಿಂಕೆ ಚರ್ಮ, ಮೊಬೈಲ್, ಹಣ ವಶಪಡಿಸಿಕೊಂಡು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications