ಬಂಡೀಪುರದಲ್ಲಿ ಜಿಂಕೆಗಳ ಆಟ.. ಕಣ್ಣಿಗೆ ರಸದೂಟ

By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಜುಲೈ 12: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲೀಗ ಜಿಂಕೆಗಳ ನೆಗೆದಾಟ ಜೋರಾಗಿದ್ದು ನೋಡುಗರ ಮನಸೆಳೆಯುತ್ತಿವೆ.

ನಿಸರ್ಗ ಚೆಲುವಿನಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಬಂಡೀಪುರ!

ಬೇಸಿಗೆಯಲ್ಲಿ ಬಿದ್ದ ಬೆಂಕಿಯಿಂದ ಬೋಳಾಗಿದ್ದ ಕಾಡಿನಲ್ಲಿ ಮಳೆ ಬಿದ್ದ ಕಾರಣ ಮತ್ತೆ ಚಿಗುರು ಕಾಣಿಸಿಕೊಂಡಿದೆ. ಬತ್ತಿ ಹೋಗಿದ್ದ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿಕೊಂಡಿರುವುದರಿಂದ ಹಸಿರು ಮೇವು ತಿಂದು ನೀರು ಕುಡಿದು ಸಂತಸದಿಂದ ನೆಗೆದಾಟವಾಡುವ ಜಿಂಕೆಗಳು ಅಲ್ಲಲ್ಲಿ ಕಾಣಸಿಗುತ್ತಿವೆ.

The game of deer in Bandipur National Park

ಕೆಲವು ತಿಂಗಳ ಹಿಂದೆ ಹಸಿರೇ ಕಾಣದೆ ಒಣಗಿ ಹೋಗಿದ್ದ ಅರಣ್ಯದಲ್ಲಿ ಹಸಿರು ಮೇವಿಗಾಗಿ ಪರಿತಪಿಸುತ್ತಾ ಸೊರಗಿ ಹೋಗಿದ್ದ ಜಿಂಕೆಗಳು ಇದೀಗ ಹುಲ್ಲು ಚಿಗುರಿದ್ದರಿಂದ ಅದನ್ನು ಮೇಯುತ್ತಾ ಖುಷಿಯಾಗಿ ಕಾಲ ಕಳೆಯುತ್ತಿವೆ. ಅಷ್ಟೇ ಅಲ್ಲ ಈ ಹಿಂದೆ ನೀರು ಮತ್ತು ಮೇವು ಅರಸಿ ದೂರ ಹೋಗಿದ್ದವುಗಳು ಮತ್ತೆ ತಮ್ಮ ಸ್ವಸ್ಥಾನಕ್ಕೆ ಮರಳಿವೆ.

ಬೇಸಿಗೆಯ ದಿನಗಳಲ್ಲಿ ಬಂಡೀಪುರಕ್ಕೆ ವನ್ಯಪ್ರಾಣಿಗಳನ್ನು ನೋಡುವ ತವಕದಿಂದ ಬರುತ್ತಿದ್ದ ದೂರದ ಪ್ರವಾಸಿಗರು ಸಫಾರಿಯ ಸಂದರ್ಭ ಹೆಚ್ಚಿನ ಕಾಡು ಪ್ರಾಣಿಗಳು ಸಿಗದೆ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಆದರೆ ಈಗ ಹಿಂಡು ಹಿಂಡಾಗಿ ಕಾಡಲ್ಲಿ ಮೇಯುವ, ಒಂದನ್ನೊಂದು ಗುದ್ದಾಡುವ, ನೆಗೆದಾಡುವ ಜಿಂಕೆಗಳನ್ನು ಕಂಡು ಸಂತಸಪಡುತ್ತಿದ್ದಾರೆ.

The game of deer in Bandipur National Park

ಇನ್ನು ಅರಣ್ಯದೊಳಗಾಗಿ ತಮಿಳುನಾಡು ಮತ್ತು ಕೇರಳಕ್ಕೆ ತೆರಳುವ ಪ್ರಯಾಣಿಕರಿಗೂ ಜಿಂಕೆಗಳು ರಸ್ತೆ ಬದಿಯಲ್ಲಿ, ಅರಣ್ಯಗಳಲ್ಲಿ ಕಾಣಸಿಗುತ್ತವೆ. ಕೆಲವರು ತಾವು ತೆರಳುತ್ತಿರುವ ವಾಹನವನ್ನು ನಿಲ್ಲಿಸಿ ಅವುಗಳ ಚಿತ್ರಗಳನ್ನು ಸೆರೆ ಹಿಡಿದು ಮುಂದೆ ಸಾಗುತ್ತಾರೆ.

ಬಂಡೀಪುರ ಅರಣ್ಯದಂಚಿನ ಬೇಟೆಗಾರರ ಸಂಚಿಗೆ ಸಾಕುಪ್ರಾಣಿಗಳು ಬಲಿ

ಕೆಲವು ಜಿಂಕೆಗಳು ಮನುಷ್ಯರನ್ನು ಕಂಡು ನೆಗೆದು ಓಡಿದರೆ, ಮತ್ತೆ ಕೆಲವು ಮೇವು ತಿಂದು ಅದನ್ನು ಅರಗಿಸುವ ಸಲುವಾಗಿಯೋ ಎಂಬಂತೆ ಒಂದನ್ನೊಂದು ಗುದ್ದಾಡುತ್ತಾ ಬಲಪ್ರಯೋಗ ನಡೆಸುತ್ತವೆ. ಮತ್ತೆ ಕೆಲವು ಹಸಿರು ಸೊಪ್ಪು ತಿನ್ನಲು ಗಿಡದ ಕೆಳಗೆ ನಿಂತು ಮೇಲಕ್ಕೆ ಕತ್ತು ಚಾಚಿ ಸರ್ಕಸ್ ಮಾಡುತ್ತವೆ. ಇಂತಹ ದೃಶ್ಯಗಳೆಲ್ಲವೂ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಮತ್ತು ಸಫಾರಿಗೆ ತೆರಳುವ ಪ್ರವಾಸಿಗರ ಮೊಬೈಲ್ ಹಾಗೂ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿವೆ.

The game of deer in Bandipur National Park

ಒಟ್ಟಾರೆ ಹೇಳಬೇಕೆಂದರೆ ಬಂಡೀಪುರಕ್ಕೆ ಜೀವಕಳೆ ಬಂದಿದೆ. ಹೀಗಾಗಿ ಸದ್ಯ ಜಿಂಕೆಗಳು ಸೇರಿದಂತೆ ಆನೆ, ಹುಲಿ, ಕಾಡುಹಂದಿಗಳು ಹಿಂಡು ಹಿಂಡಾಗಿ ಎಲ್ಲೆಂದರಲ್ಲಿ ಓಡಾಡುತ್ತಾ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಇಡೀ ನಿಸರ್ಗ ಹಸಿರಿನಿಂದ ಕಂಗೊಳಿಸುತ್ತಿರುವ ಕಾರಣ ನಗರಗಳ ನಿತ್ಯ ಜಂಜಾಟದಲ್ಲಿ ಮುಳುಗೇಳುವ ಜನ ಒಂದಷ್ಟು ಸಮಯವನ್ನಾದರೂ ನಿಸರ್ಗದ ಮಡಿಲಲ್ಲಿ ಕಳೆಯೋಣ ಎಂದು ಬಂಡೀಪುರಕ್ಕೆ ಬರುತ್ತಿದ್ದು, ಅವರ ಮನಕ್ಕೆ ಮುದನೀಡುವಲ್ಲಿ ವನ್ಯ ಪ್ರಾಣಿಗಳು ಯಶಸ್ವಿಯಾಗಿವೆ ಎಂದರೆ ತಪ್ಪಾಗಲಾರದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The viewers are luring the deer at Bandipur National Park. A few months ago, the trees have dried up. The deer have now been grazing and enjoying the grass.
Please Wait while comments are loading...