ಚಾಮರಾಜನಗರದಲ್ಲಿ ಕೇಸರಿ ಧ್ವಜಕ್ಕೆ ಬೆಂಕಿ, ಮೂವರ ಬಂಧನ

Posted By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 17: ದೇವಾಲಯದ ಮೇಲಿದ್ದ ಕೇಸರಿ ಧ್ವಜವನ್ನು ತೆಗೆದು ಬೈಕ್ ಮೇಲೆ ಇಟ್ಟು ಬೆಂಕಿ ಹಚ್ಚಿ ಕೋಮು ಗಲಭೆಗೆ ಹುನ್ನಾರ ನಡೆಸಿದ ಮೂವರನ್ನು ಚಾಮರಾಜನಗರದ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 13 ರಂದು ನಡು ರಾತ್ರಿ ಧ್ವಜಕ್ಕೆ ಬೆಂಕಿ ಹಚ್ಚಲಾಗಿದೆ.

ಗಾಳಿಪುರ ಬಡಾವಣೆಯ ಪ್ರಕಾಶ್, ಮಂಜು ಮತ್ತು ಬಂಗಾರ ಬಂಧಿತರಾಗಿದ್ದಾರೆ. ಇವರು ಚಾಮರಾಜನಗರ ಪಟ್ಟಣಕ್ಕೆ ಸೇರಿದ ಗಾಳಿಪುರ ಬಡಾವಣೆಯ ನಾಯಕರ ಬೀದಿಯಲ್ಲಿರುವ ಗಣೇಶ ದೇವಾಲಯದ ಮೇಲೆ ಹಾರಾಡುತ್ತಿದ್ದ ಕೇಸರಿ ಧ್ವಜವನ್ನು ತೆಗೆದು ಬೈಕ್ ಮೇಲೆ ಇಟ್ಟು ಸುಟ್ಟಿದ್ದರು. ಈ ಮೂಲಕ ಕೋಮುಗಲಭೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

Temple flag torched in Chamarajanagar, 3 arrested

ಪೋಷಕರಿಂದ ಠಾಣೆಗೆ ಮುತ್ತಿಗೆ

ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲು ಮುಂದಾದ ಪೊಲೀಸರ ಕ್ರಮವನ್ನು ಖಂಡಿಸಿ ಆರೋಪಿಗಳ ಹೆತ್ತವರು ಮತ್ತು ಸಾರ್ವಜನಿಕರು ಮಹಿಳೆಯರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, "ಅಮಾಯಕ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಲಾಗುತ್ತಿದೆ. ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸುತ್ತೇವೆ," ಎಂದು ಧರಣಿ ನಡೆಸಿದರು.

"ಪಟ್ಟಣ ಪೊಲೀಸರು ನಡು ರಾತ್ರಿ ಬಂದು ಮನೆಯಲ್ಲಿದ್ದ ಮಕ್ಕಳನ್ನು ಧ್ವಜಕ್ಕೆ ಬೆಂಕಿ ಹಾಕಿ ಸುಟ್ಟಿದ್ದೀಯಾ ಎಂದು ಧರ ಧರನೆ ಎಳೆದುಕೊಂಡು ಹೋಗಿದ್ದಾರೆ. ಕೆಲವು ಕಾಣದ ವ್ಯಕ್ತಿಗಳ ಕೈವಾಡದಿಂದ ಪೊಲೀಸರು ಈ ರೀತಿಯಾಗಿ ವರ್ತನೆ ಮಾಡಿದ್ದಲ್ಲದೆ ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ," ಎಂದು ಗೃಹಿಣಿ ರತ್ನಮ್ಮ ಎಂಬುವರು ದೂರಿದ್ದಾರೆ.

ಮೂರು ದಿನಗಳ ಹಿಂದೆ ಗಾಳಿಪುರ ಬಡಾವಣೆಯಲ್ಲಿ ಕೇಸರಿ ಧ್ವಜಕ್ಕೆ ಬೆಂಕಿ ಬಿದ್ದ ಪ್ರಕರಣದಲ್ಲಿ ಇತರೆ ಸಂಘಟನೆಯೊಂದರ ಪಾತ್ರ ಇರುವುದು ಸ್ಪಷ್ಟವಾಗಿದ್ದರೂ ಪೊಲೀಸರು ಹಿಂದೂ ಯುವಕರನ್ನು ಬಂಧಿಸಿ ಆರೋಪಿ ಎಂದು ಹಣೆ ಪಟ್ಟಿ ಕಟ್ಟಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಜಾದ್ ಹಿಂದೂ ಸೇನೆಯ ಶಿವರಾಜ್ ಆರೋಪಿಸಿದ್ದಾರೆ. ಸಮಗ್ರ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three Miscreants arrested who allegedly torched the flag of a Ganesha temple on Nayaka Beedhi, Galipura Layout in the Chamrajanagar city on Wednesday night.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ