ಚಾಮರಾಜನಗರ ಜಿಲ್ಲೆಯಲ್ಲಿನ ದೇಗುಲಗಳಿಗೆ ಕುಟುಂಬ ಸಮೇತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭೇಟಿ
ಚಾಮರಾಜನಗರ, ಅಕ್ಟೋಬರ್, 04: ಮಹಾಲಯ ಅಮಾವಾಸ್ಯೆ ಹಿನ್ನೆಲೆ ರಾಜ್ಯಾದ್ಯಂತ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ. ಹಾಗೆಯೇ ಇಂದು (ಅಕ್ಟೋಬರ್ 04) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕುಟುಂಬ ಸಮೇತರಾಗಿ ಬಿಳಿಗಿರಿರಂಗನ ಬೆಟ್ಟ, ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ ಗಮನ ಸೆಳೆದರು.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥ ದೇವಸ್ಥಾನಕ್ಕೆ ಶುಕ್ರವಾರ (ಅಕ್ಟೋಬರ್ 04) ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ, ಅರ್ಚನೆ ಮಾಡಿಸಿದರು. ಬಳಿಕ, ಬಿಳಿಗಿರಿರಂಗನ ಬೆಟ್ಟದಿಂದ ಕೆ.ಗುಡಿಗೆ ಬಂದು ಅರಣ್ಯ ಸೌಂದರ್ಯ ವೀಕ್ಷಣೆ ಮಾಡಿದರು.

ಮಧ್ಯಾಹ್ನ ಚಾಮರಾಜನಗರದ ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದು ಅರ್ಚನೆ ಮಾಡಿಸಿದರು. ಹರಳುಕೋಟೆ ಆಂಜನೇಯಸ್ವಾಮಿ ದೇಗುಲವು ಬಬ್ರುವಾಹನನಿಂದ ಸ್ಥಾಪಿತಗೊಂಡ ಮೂರ್ತಿ ಎಂಬ ನಂಬಿಕೆ ಇದ್ದು, ಪುರಾಣ ಐತಿಹ್ಯ ಹಾಗೂ ಇತಿಹಾಸ ಇದೆ.
ಹರಿದುಬಂದ ಭಕ್ತಸಾಗರ: ಸೋಮವಾರದಿಂದ ಮೂರು ದಿನಗಳ ಕಾಲ ಮಹಾಲಯ ಅಮಾವಾಸ್ಯೆ ಜಾತ್ರೆ ನಡೆದಿದ್ದು, ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದೆ.
ಸೋಮವಾರ ಎಣ್ಣೆ ಮಜ್ಜನ ವಿಶೇಷ ಸೇವೆ ಉತ್ಸವಾದಿಗಳು ನಡೆದರೆ, ಅಕ್ಟೋಬರ್ 2ರಂದು ಮಹಾಲಯ ಅಮಾವಾಸ್ಯೆ ವಿಶೇಷ ಉತ್ಸವಗಳು ಜರುಗಲಿದೆ. ಅಕ್ಟೋಬರ್ ಮೂರರಿಂದ ನವರಾತ್ರಿ ಉಯ್ಯಾಲೆ ಉತ್ಸವ ವಿಶೇಷ ಪೂಜೆಗಳು ಆರಂಭವಾಗಲಿದ್ದು, ಸೋಮವಾರದಿಂದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷ ದಾಸೋಹ, ಅತಿಥಿ ಗಣ್ಯರಿಗೆ ನೇರದರ್ಶನ, ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಬೆಂಗಳೂರು, ರಾಮನಗರ, ಕನಕಪುರ, ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಕೋಲಾರ, ಶಿವಮೊಗ್ಗ ತಮಿಳುನಾಡು ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡಲಿದ್ದು ಯಾವುದೇ ಅನಾನುಕೂಲವಾಗದಂತೆ ಪ್ರಾಧಿಕಾರದ ವತಿಯಿಂದ ಈಗಾಗಲೇ ಸೂಕ್ತ ಕ್ರಮ ವಹಿಸಲಾಗಿದೆ.
ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ, ಪೊಲೀಸ್ ಸಿಬ್ಬಂದಿಗಳು ಗೃಹರಕ್ಷಕ ದಳದವರು ಅಧಿಕಾರಿ ವರ್ಗದವರಿಗೆ ವಿಶೇಷ ದಾಸೋಹ ತೆರೆಯಲಾಗಿದೆ. ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಭಕ್ತಾದಿಗಳು ನೀಡಿರುವ ದವಸಧಾನ್ಯಗಳು ತರಕಾರಿಗಳ ಜೊತೆಗೆ ಪ್ರಾಧಿಕಾರದ ವತಿಯಿಂದಲೂ ಮಾರುಕಟ್ಟೆಯಿಂದ ಉತ್ತಮ ತರಕಾರಿ ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಇದಲ್ಲದೆ ಬರುವಂತಹ ಭಕ್ತಾದಿಗಳಿಗೆ ಗುಣಮಟ್ಟದ ಆಹಾರ ವಿತರಿಸಲು ಈಗಾಗಲೇ ಸಿಬ್ಬಂದಿಗಳಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ. ಈ ರಘು ಸೂಚನೆ ನೀಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ನೇರದರ್ಶನ ಅವಕಾಶ ಮಾಡಿಕೊಡುವಂತೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಆಲಂಬಾಡಿ ಬಸವ ದ್ವಾರದಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿಥಿ ಗಣ್ಯರು, ಅಂಗವಿಕಲರಿಗೆ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಿ ದರ್ಶನ ಪಡೆಯಬಹುದಾಗಿದೆ.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳು ಲಡ್ಡು ಪ್ರಸಾದಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಈಗಾಗಲೇ ಪ್ರಾಧಿಕಾರದ ವತಿಯಿಂದ ಎರಡು ಲಕ್ಷ ಲಾಡು ತಯಾರಿಸಿ ಸಂಗ್ರಹ ಮಾಡಲಾಗಿದೆ.
ಮೂರು ದಿನಗಳ ಕಾಲ ನಡೆಯುವ ಮೊದಲ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವುದರಿಂದ ಬೆಂಗಳೂರು, ಮೈಸೂರು ಕೊಳ್ಳೇಗಾಲ, ಮಂಡ್ಯ, ನಂಜನಗೂಡು ಸೇರಿದಂತೆ ಹಲವು ಡಿಪೋಗಳಿಂದ 300 ಬಸ್ಸುಗಳನ್ನು ಬಿಡಲಾಗಿದೆ.












Click it and Unblock the Notifications