ಕೊಳ್ಳೇಗಾಲ: ನಕ್ಷತ್ರ ಆಮೆ ಸಾಗಾಟ ಮಾಡುತ್ತಿದ್ದ ಮೂವರ ಬಂಧನ
ಚಾಮರಾಜನಗರ, ಸೆಪ್ಟೆಂಬರ್, 19: ಇತ್ತೀಚೆಗಷ್ಟೇ ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿತ್ತು. ಇದೀಗ ಮತ್ತೆ ಮುಡಿಗುಂಡದ ರಾಷ್ಟ್ರೀಯ ಹೆದ್ದಾರಿ ಬಳಿ ಅಕ್ರಮವಾಗಿ ಜೀವಂತ ನಕ್ಷತ್ರ ಆಮೆಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ತಾಲ್ಲೂಕು ಕುಳ್ಳೂರು ಗ್ರಾಮದ ಮಾದೇಶ್, ತಮಿಳುನಾಡಿನ ಸತ್ತಿ ತಾಲ್ಲೂಕಿನ ಕಾನಗೆರೆ ಗ್ರಾಮದ ಶಿವಕುಮಾರ್, ಪಿರಿಯಾಪಟ್ಟಣ ತಾಲ್ಲೂಕಿನ ಆನಂದನಗರ ಗ್ರಾಮದ ಜಾಕೀರ್ ಷರೀಫ್ ಬಂಧಿತ ಆರೋಪಿಗಳು. ಇವರಿಂದ ಮೂರು ಜೀವಂತ ನಕ್ಷತ್ರ ಆಮೆಗಳು, ಒಂದು ಮಾರುತಿ ಸುಜುಕಿ ಕಾರನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಮೆಗಳನ್ನು ಹಿಡಿದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹಿನ್ನೆಲೆ ಕಾರಿನಲ್ಲಿ ಸಾಗಾಣಿಕೆ ಮಾಡುತ್ತಿರುವ ಈ ವೇಳೆ ಅರಣ್ಯ ಸಂಚಾರಿ ದಳ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಈ ಸಂಬಂಧ ಅರಣ್ಯ ಸಂಚಾರಿ ದಳದ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಆರೋಪಿಗಳ ಬಂಧನ: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಇತ್ತೀಚೆಗಷ್ಟೇ ಬಂಧಿಸಿತ್ತು. ಹಾಗಾದರೆ ಬಂಧಿತ ಆರೋಪಿಗಳ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ಪ್ರಕಾಶ್(38) ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ನಾಗೇಂದ್ರಸ್ವಾಮಿ(45), ಮಳವಳ್ಳಿ ತಾಲೂಕಿನ ರಾಗಿಭೋಮ್ಮನಹಳ್ಳಿ ನಾಗರಾಜು(54) ಬಂಧಿತ ಆರೋಪಿಗಳು.
ಹನೂರು ತಾಲೂಕಿನ ಗುಂಡಿಮಾಳ ಮಾರ್ಗದ ಮೂಲಕ ಮಾರಾಟ ಮಾಡುವ ಉದ್ದೇಶದಿಂದ ನಕ್ಷತ್ರ ಆಮೆ ರವಾನೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹನೂರಿನ ಹುಲುಸುಗುಡ್ಡೆಯ ಬಳಿ ದಾಳಿ ನಡೆಸಿದ ಪೊಲೀಸರು ಆರೋಪಿಗಳ ಸಹಿತ 1ಕೆಜಿ 280 ಗ್ರಾಂ ತೂಕದ ಎರಡು ಜೀವಂತ ನಕ್ಷತ್ರ ಆಮೆ, ಟಾಟಾ ಇಂಡಿಕಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications