ಕೇರಳದ ಕಸಾಯಿಖಾನೆ ತ್ಯಾಜ್ಯ ಕರ್ನಾಟಕದಲ್ಲಿ ವಿಲೇವಾರಿ- ಅಧಿಕಾರಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ
ಚಾಮರಾಜನಗರ, ಸೆಪ್ಟೆಂಬರ್ 29: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಜನರಿಗೆ ಅಂತರ್ ರಾಜ್ಯದ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇರಳ ಮತ್ತು ತಮಿಳುನಾಡು ಎರಡು ಅಂತರ ರಾಜ್ಯ ಗಡಿಗಳನ್ನ ಹಂಚಿಕೊಂಡಿರುವ ಗುಂಡ್ಲುಪೇಟೆಗೆ ಕೇರಳದ ಘನ ತ್ಯಾಜ್ಯ ಯಾವುದೇ ಅಡೆ ತಡೆ ಇಲ್ಲದೇ ವಿಲೇವಾರಿ ಆಗುತ್ತಿದೆ. ಅಧಿಕಾರಿಗಳ ಜಾಣ ಕುರುಡುತನ ನಿರ್ಲಕ್ಷ್ಯಕ್ಕೆ ಗಡಿಭಾಗದ ಜನತೆ ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುವಂತಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಕೇರಳದ ಕಸಾಯಿಖಾನೆಯ ತ್ಯಾಜ್ಯವನ್ನು ಕಂಟೇನರ್ ಲಾರಿಗಳಲ್ಲಿ ಗೌಪ್ಯವಾಗಿ ಸಾಗಿಸಿ ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ಬದಿಯ ಹಲವೆಡೆ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯದ ಕೆಟ್ಟ ವಾಸನೆಯಿಂದ ಈ ಮಾರ್ಗವಾಗಿ ಚಲಿಸುವ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಕ್ಲಿಷ್ಟ ಪರಿಸ್ಥಿತಿ ನಿರ್ಮಾಣವಾಗಿದ್ದರು ಸಹ ಇಲಾಖೆ ಅಧಿಕಾರಿಗಳು ಚಕಾರ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕರುನಾಡ ಯುವಶಕ್ತಿ ಸಂಘಟನೆ ತಾ.ಅಧ್ಯಕ್ಷ ಮುನೀರ್ ಪಾಷಾ ಆರೋಪಿಸಿದ್ದಾರೆ.

ಕೇರಳದಲ್ಲಿ ತ್ಯಾಜ್ಯ ನಿರ್ವಹಣಾ ನಿಯಮಗಳಿದ್ದು ಅದನ್ನ ಉಲ್ಲಂಘಿಸಿದರೆ 50 ಸಾವಿರಕ್ಕೂ ಹೆಚ್ಚು ದಂಡ ತೆರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ ತ್ಯಾಜ್ಯ ನಿರ್ವಹಣೆ ನಿಯಮ ಸಡಿಲವಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೇರಳದ ಕೆಲವರು, ಆಸ್ಪತ್ರೆ ತ್ಯಾಜ್ಯ ಮತ್ತು ಕಸಾಯಿ ಖಾನೆ ಘನ ತ್ಯಾಜ್ಯವನ್ನು ಗುಂಡ್ಲುಪೇಟೆಗೆ ವಿಲೇವಾರಿ ಮಾಡುತ್ತಿದ್ದಾರೆ.
ಕೇರಳದಿಂದ ಘನ ತ್ಯಾಜ್ಯ ಹೊತ್ತು ತರುವ ಲಾರಿಗಳು ಮೂಲೆಹೊಳೆ ಮತ್ತು ಮದ್ದೂರು ಚೆಕ್ ಪೋಸ್ಟ್ ಗಳನ್ನ ದಾಟಿ ಬರಬೇಕಾಗಿದೆ. ಆದರೆ ಗಡಿಯಲ್ಲಿ ತೀಕ್ಷ್ಣ ಶೋಧ ನಡೆಸಬೇಕಿರುವ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೇರಳದ ಕೊಳಕು ತ್ಯಾಜ್ಯ ನಮ್ಮಲ್ಲಿಗೆ ಬಂದು ಸೇರುತ್ತಿದೆ ಎಂದು ಕರುನಾಡ ಯುವಶಕ್ತಿ ಸಂಘಟನೆ ತಾಲೂಕು ಅಧ್ಯಕ್ಷ ಮುನೀರ್ ಪಾಷಾ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತವಾಗಿ ಡೆಂಗ್ಯು ಮಲೇರಿಯಾ ಇನ್ನಿತರ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಅಲರ್ಟ್ ಆಗಬೇಕಿರುವ ಇಲಾಖೆ ಅಸಡ್ಡೆತನ ತೋರುತ್ತಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ. ಸಾಂಕ್ರಾಮಿಕ ರೋಗಗಳು ದಿನದಿಂದ ದಿನಕ್ಕೆ ಉಲ್ಬಣವಾಗ ತೊಡಗಿದ್ದು ಅಶುಚಿತ್ವಕ್ಕೆ ಕಾರಣರಾದರನ್ನು ಬಂಧಿಸಿ, ಶಿಕ್ಷೆ ನೀಡಬೇಕಾದ ಅಧಿಕಾರಿಗಳೇ ಅಶಕ್ತತನ ತೋರಿದರೆ ನಿಯಂತ್ರಣಕ್ಕೆ ಮುಂದಾಗುವವರು ಯಾರು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡತೊಡಗಿದೆ.
ಮುಂದಿನ ದಿನಗಳಲ್ಲಿ ಕೇರಳದ ಘನತ್ಯಾಜ್ಯ ಸಾಗಾಣಿಕೆಗೆ ಮತ್ತು ವಿಲೇವಾರಿಗೆ ಅವಕಾಶ ನೀಡದೆ, ಮದ್ದೂರು ಮತ್ತು ಮೂಲೆಹೊಳೆ ತಪಾಸಣಾ ಕೇಂದ್ರಗಳಲ್ಲಿ ಕಟ್ಟೆಚ್ಚರವಹಿಸಿ ವಿಲೇವಾರಿಗೆ ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಿ ಎಂದು ಕರುನಾಡ ಯುವಶಕ್ತಿ ಸಂಘಟನೆ ಆಗ್ರಹಿಸಿದ್ದಾರೆ.












Click it and Unblock the Notifications