ಮಲೆ ಮಾದಪ್ಪನ ಬೆಟ್ಟದಲ್ಲಿ ಶತ ಕುಂಭೋತ್ಸವ: 108 ಮನೆಯವರಿಂದ ಪೂಜೆ
ಚಾಮರಾಜನಗರ, ಸೆಪ್ಟೆಂಬರ್, 02: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶ್ರಾವಣ ಮಾಸ ಮುಕ್ತಾಯವಾಗಿದ್ದು, ಈ ಹಿನ್ನೆಲೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕುಂಭಾಭಿಷೇಕ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ನೆರವೇರಿತು. ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.
ಮಲೆ ಮಹದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಸೋಮವಾರ ಶ್ರಾವಣ ಮಾಸದ ಕೊನೆಯ ದಿನದ ಶತಕುಂಭೋತ್ಸವ ಸೇವೆ ನೆರವೇರಿಸಲಾಯಿತು.

ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹದೇಶ್ವರ ಸ್ವಾಮಿ ಹಾಗೂ ಉಮಾ ಮಹೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪದ ಜತೆ ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ, ನಂದಿಕಂಬಗಳ ಜತೆ ಮೆರವಣಿಯಲ್ಲಿ ದೇವಾಲಯದ ಬೇಡಗಂಪಣ ಅರ್ಚಕ ತಮ್ಮಡಿಗಳ 108 ಮನೆತನದವರು ಪೂಜೆ ಸಲ್ಲಿಸಿದರು. ಪದ್ಧತಿ ಪ್ರಕಾರ ಉಪವಾಸವಿದ್ದು, ಕೆಂಪು ಬಣ್ಣದ ಮಡಿ ವಸ್ತವನ್ನು ಧರಿಸಿಕೊಂಡು ಪೂಜೆ ಮಾಡಲಾಯಿತು.
ಮಜ್ಜನ ಬಾವಿಯಿಂದ 108 ಕಳಸಗಳಿಗೆ ನೀರು ತುಂಬಿ ಪೂಜೆ ಸಲ್ಲಿಸಿದ ನಂತರ ಶಿವ ಪಾರ್ವತಿಯ ವಿಗ್ರಹಕ್ಕೆ ಸಂಕಲ್ಪಾದಿ ಅಷ್ಟಗಂಧ ಪೂಜೆ, ಸಹಸ್ರನಾಮ ಬಿಲ್ವಾರ್ಚನೆ, ಧೂಪ ದೀಪದಾರತಿ ಬೆಳಗಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
108 ಕುಂಭದ ಕಳಸಗಳನ್ನು ಅರ್ಚಕರು ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ದೇಗುಲ ಪ್ರವೇಶಿಸಿದರು. ಆಗಮಿಕ ಅರ್ಚಕರಿಂದ ಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ ಸಲ್ಲಿಸಿದ ನಂತರ ಮಾದಪ್ಪನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಗಳ ಜೊತೆ 108 ಕುಂಭ ಹಾಗೂ ಎಳನೀರಿನ ಅಭಿಷೇಕ ನೆರವೇರಿತು.
ಈ ವೇಳೆ ಶ್ರೀ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಸಾಲೂರು ಮಠ ವೇದ ಆಗಮ ಪಾಠಶಾಲೆಯ ಆಗಮಿಕರು, ವೇದ ಪಠಣ ವಿದ್ಯಾರ್ಥಿಗಳು, ಶ್ರೀ ಅರ್ಚಕ ಮುಖಂಡರು ಸೇರಿದಂತೆ ಇತರರಿದ್ದರು.
ಸಾವಿರಾರು ಮಂದಿ ಭಕ್ತಾದಿಗಳ ಆಗಮನ: ಆಗಸ್ಟ್ 31 ನಾಲ್ಕನೇ ಹಾಗೂ ಕಡೆ ಶ್ರಾವಣ ಶನಿವಾರ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಹಾಗೂ ಯಾತ್ರ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ಗೋಪಾಲನ ದರ್ಶನ ಪಡೆದರು.
ಶ್ರಾವಣ ಮಾಸದ ಕೊನೆಯ ಶನಿವಾರವಾದ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಟ್ಟಕ್ಕೆ ತೆರಳಲು ಸುಮಾರು 25ಕ್ಕೂ ಅಧಿಕ ಬಸ್‍ಗಳನ್ನು ನಿಯೋಜನೆ ಮಾಡಲಾಗಿತ್ತು. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಊಟಿ, ಕೇರಳ ಕಡೆಯಿಂದ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿದ್ದರು. ಬೆಳಗ್ಗೆ 10 ಗಂಟೆಯಿಂದಲೇ ಅಧಿಕ ಭಕ್ತರು ಭೇಟಿ ನೀಡಿದ್ದ ಕಾರಣ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕಿಲೋ ಮೀಟರ್ ದೂರದವರೆಗೆ ಜನರು ಸಾಲುಗಟ್ಟಿ ಗಂಟೆಗಟ್ಟಲೇ ನಿಂತು ಟಿಕೆಟ್ ಖರೀದಿಸಿ ಬೆಟ್ಟಕ್ಕೆ ತೆರಳಿದರು.
ಗೋಪಾಲಸ್ವಾಮಿ ಬೆಟ್ಟಕ್ಕೆ 12 ಗಂಟೆ ವೇಳೆಗೆ ಅಧಿಕ ಮಂದಿ ಭಕ್ತರು ಆಗಮಿಸಿದ್ದ ಕಾರಣ ಜನಜಂಗುಳಿ ಹೆಚ್ಚಿನ ರೀತಿಯಲ್ಲಿ ಕಂಡು ಬಂತು. ಇದರಿಂದ ದೇವಸ್ಥಾನದ ಸುತ್ತಲೂ ಎರಡು ಸಾಲಿನಲ್ಲಿ ಭಕ್ತರು ಗಂಟೆಗಟ್ಟಲೇ ನಿಂತು ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು. ವಾತಾವರಣ ತಣ್ಣಗಿದ್ದ ಕಾರಣ ಹೆಚ್ಚಿನ ಸಮಸ್ಯೆ ಆಗಲಿಲ್ಲ.












Click it and Unblock the Notifications