ಶಾಸಕ ಮುನಿರತ್ನಗೆ ಗಲ್ಲು ಶಿಕ್ಷೆ ನಿಡ್ಬೇಕು, ಇಲ್ಲದಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಗ್ಯಾರಂಟಿ: ದಲಿತ ಸಂಘಟನೆಗಳ ಎಚ್ಚರಿಕೆ
ಚಾಮರಾಜನಗರ, ಸೆಪ್ಟೆಂಬರ್, 15: ಶಾಸಕ ಮುನಿರತ್ನ ಜಾತಿನಿಂದನೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನೆ ಒಕ್ಕೂಟ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು. ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಮುನಿರತ್ನ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.
ಅಲ್ಲದೆ, ಮುನಿರತ್ನ ಭಾವಚಿತ್ರಕ್ಕೆ ಚಪ್ಪಲಿಗಳಿಂದ ಹೊಡೆದು ಬೆಂಕಿ ಹಚ್ಚಿ ಅವರ ಶಾಸಕ ಸ್ಥಾನವನ್ನು ವಜಾ ಮಾಡಬೇಕು. ಜನಪ್ರತಿನಿಧಿಯಾಗಿ ಆಯ್ಕೆಯಾಗಿ ತುಚ್ಛವಾಗಿ ಮಾತನಾಡಿರುವುದನ್ನು ಖಂಡಿಸಿ ಅವರಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು.

ಗುಂಡ್ಲುಪೇಟೆಯಲ್ಲಿ ಪೊಲೀಸರಿಗೆ ದೂರು: ಜಾತಿ ನಿಂದನೆ ಮಾಡಿರುವ ಶಾಸಕ ಮುನಿರತ್ನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಪರ ಹಾಗೂ ವಿವಿಧ ಪ್ರಗತಿಪರ ಸಂಘಟನೆ ಗುಂಡ್ಲುಪೇಟೆ ಠಾಣೆಗೆ ದೂರು ನೀಡಿದರು.
ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದಲಿತ ಪರ ಹಾಗೂ ವಿವಿಧ ಪ್ರಗತಿಪರ ಸಂಘಟನೆ ಮುಖಂಡರು ತೆರಳಿ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕ ಮುನಿರತ್ನ ದಲಿತ ವ್ಯಕ್ತಿಗೆ ಜಾತಿ ನಿಂದನೆ ಹೆಸರಿನಲ್ಲಿ ಅವಾಚ್ಯ ಶಬ್ಧಗಳನ್ನು ಬಳಸುವ ಮೂಲಕ ಅವಮಾನ ಮಾಡಿದ್ದಾರೆ. ಜೊತೆಗೆ ಕೊಲೆ ಬೆದರಿಕೆಯನ್ನು ಸಹ ಹಾಕಿದ್ದಾರೆ. ಇದು ಸರಿಯಾದ ನಡೆಯಲ್ಲ. ಇದರಿಂದ ಪರಿಶಿಷ್ಟ ಜಾತಿ ಸಮುದಾಯದವರ ಮನಸ್ಸಿಗೆ ತುಂಬಾ ನೋವಾಗಿದೆ. ಈ ಕಾರಣದಿಂದ ಕೂಡಲೇ ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದರು.
ಇತ್ತೀಚೆಗೆ ದಲಿತರ ಹಲ್ಲೆ, ಕೊಲೆ ಬೆದರಿಕೆಯಂತಹ ಘಟನೆಗಳು ಹೆಚ್ಚಿನ ರೀತಿಯಲ್ಲಿ ನಡೆಯುತ್ತಿವೆ. ಇದರಿಂದ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಈ ಘಟನೆಯನ್ನು ಬಹಳ ಗಂಭಿರವಾಗಿ ಪರಿಗಣಿಸಿ ಶಾಸಕ ಮುನಿರತ್ನ ವಿರುದ್ಧ ಸೂಕ್ತ ಕ್ರಮವನ್ನು ರಾಜ್ಯ ಸರ್ಕಾರ ಜರುಗಿಸಬೇಕು. ಇಲ್ಲದಿದ್ದರೆ, ವಿವಿಧ ದಲಿತ ಸಮುದಾಯ ಹಾಗೂ ಪ್ರಗತಿಪರ ಸಂಘಟನೆಗಳ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಚಿವ ಕೆ.ವೆಂಕಟೇಶ್ ಹೇಳಿದ್ದೇನು?: ರಾಹುಲ್ ಗಾಂಧಿ ಜಾತಿ ಬಗ್ಗೆ ಇತ್ತೀಚೆಗಷ್ಟೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದರು. ಇದಕ್ಕೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್ ಅವರು, ರಾಹುಲ್ ಗಾಂಧಿ ಅವರದ್ದು ಮಾನವ ಜಾತಿ ಎಂದು ಹೇಳುವ ಮೂಲಕ ಯತ್ನಾಳ್‌ಗೆ ತಿರುಗೇಟು ನೀಡಿದ್ದಾರೆ.
ಚಾಮರಾಜನಗರದ ಮೂಗೂರು ಕ್ರಾಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಜಾತಿ ಬಗ್ಗೆ ಟೀಕಿಸಿದ್ದ ಬಸನಗೌಡ ಯತ್ನಾಳ್ ಮಾತಿಗೆ ಕಿಡಿಕಾರಿದರು. ಯತ್ನಾಳ್ ತಮ್ಮ ತೀಟೆಗಾಗಿ ಆ ರೀತಿ ಮಾತನಾಡುತ್ತಿದ್ದಾರೆ. ನಮ್ಮದೆಲ್ಲ ಮಾನವ ಜಾತಿ,
ಯತ್ನಾಳ್‌ಗೆ ಮಾತನಾಡುವ ತೀಟೆ, ಮಾತನಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದರು.
ಮುನಿರತ್ನ ಬಂಧನದ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಾತಿ ನಿಂದನೆ ಮಾಡಿದವರನ್ನು ಬಂಧಿಸುವುದು ತಪ್ಪಾ? ಬಿಜೆಪಿ ಎಲ್ಲವನ್ನೂ ರಾಜಕೀಯ ಉದ್ದೇಶ ಎನ್ನುತ್ತದೆ. ಸಿದ್ದರಾಮಯ್ಯ ಮೇಲೆ ಕೇಸ್ ಹಾಕಿದ್ದು ರಾಜಕೀಯ ಉದ್ದೇಶ ಅಲ್ವಾ? ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಿಎಂ ಸಿದ್ದರಾಮಯ್ಯನವರು ಪ್ರಭಾವ ಬೀರಿ ಸೈಟ್ ತಗೊಂಡಿದ್ದಾರಾ? ಬಿಜೆಪಿ ಮಾಡಿದ್ದೆಲ್ಲಾ ಸರಿ, ನಾವು ಮಾಡೋದು ತಪ್ಪಾ.? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.












Click it and Unblock the Notifications