ಸಂತೇಮರಹಳ್ಳಿ: ಎಸ್‌ಬಿಐ ಬ್ಯಾಂಕ್ ಕ್ಯಾಷಿಯರ್‌ನಿಂದಲೇ ಗ್ರಾಹಕರಿಗೆ ₹26,15,920 ಪಂಗನಾಮ, ಮುಂದಾಗಿದ್ದೇನು?
ಚಾಮರಾಜನಗರ, ಮಾರ್ಚ್, 23: ಗ್ರಾಹಕರು ತಮ್ಮ ಖಾತೆಗಳಿಗೆ ಕಟ್ಟಿದ್ದ ಹಣವನ್ನು ಜಮೆ ಮಾಡದೇ ಕ್ಯಾಷಿಯರ್ ಲಕ್ಷಾಂತರ ರೂಪಾಯಿ ಹಣ ಗುಳುಂ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದಿದೆ.
ಸಂತೇಮರಹಳ್ಳಿ ಶಾಖೆಯ ಎಸ್‌ಬಿಐ ಬ್ಯಾಂಕ್‌ನ ಕ್ಯಾಷ್ ಆಫೀಸರ್ ಮನೋರಂಜನ್ ಮುರ್ಮು ಎಂಬಾತ ಸ್ವಸಹಾಯ ಸಂಘಗಳ ಸಾಲ ಮರುಪಾವತಿ ಹಣವನ್ನು ಜಮೆ ಮಾಡದೇ ಗುಳುಂ ಮಾಡಿರುವ ಆರೋಪಿ. ಬರೋಬ್ಬರಿ 26,15,920 ರೂಪಾಯಿ ಹಣವನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾನೆ ಎಂದು ಬ್ಯಾಂಕ್ ವ್ಯವಸ್ಥಾಪಕರು ದೂರು ಕೊಟ್ಟಿದ್ದಾರೆ.

ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿ ಕೆಲವು ಸ್ವ-ಸಹಾಯ ಸಂಘಗಳು ಸಾಲ ಪಡೆದು ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಹಣವನ್ನು ಖಾತೆಗಳಿಗೆ ಜಮೆ ಮಾಡದೇ ಕೌಂಟರ್ ಚಲನ್ ನ್ನು ಗ್ರಾಹಕರಿಗೆ ಕೊಟ್ಟು ಯಾಮಾರಿಸಿದ್ದಾನೆ ಎಂದು ದೂರು ಕೊಡಲಾಗಿದೆ. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
1.44 ಕೋಟಿ ರೂಪಾಯಿ ಹಣ ವಶ: ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಟಿಎಂಗಳಿಗೆ ಹಣ ತುಂಬಲು ಚಿತ್ರದುರ್ಗ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ. ಆದ್ದರಿಂದ 1.44 ಕೋಟಿ ರೂಪಾಯಿ ಹಣ ಹಾಗೂ ವಾಹನ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾಗಿ ತಹಶೀಲ್ದಾರ್ ರಾಜೇಶ್ ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವಶಪಡಿಸಿಕೊಂಡ ಹಣವನ್ನು ಸೂಕ್ತ ವಿಚಾರಣೆಯ ಬಳಿಕೆ ಜಿಲ್ಲಾ ಪಂಚಾಯತಿ ಸಿಇಓ ನೇತೃತ್ವದಲ್ಲಿ ನಗದು ಜಪ್ತಿ ಸಮಿತಿ ವಶಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ದಾಖಲೆ ಇಲ್ಲದ 1.50 ಲಕ್ಷ ರೂಪಾಯಿ ವಶ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ಹಣವನ್ನು ತುರುವನೂರು ಹೋಬಳಿ ಚೆಕ್‌ಪೋಸ್ಟ್‌ನಲ್ಲಿ ಶನಿವಾರ (ಮಾರ್ಚ್ 23) ವಶಕ್ಕೆ ಪಡೆಯಲಾಗಿದೆ.
ಎಫ್‍ಎಸ್‍ಟಿ ತಂಡದ ಮುಖ್ಯಸ್ಥ ಟಿ.ಕೆ.ಸಂತೋಷ್ ಕುಮಾರ್ ಅವರು ತುರುವನೂರು ಹೋಬಳಿ ಚೆಕ್‍ಪೋಸ್ಟ್‍ನಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಕೊಪ್ಪಳದ ಇರ್ಪಾನ್ ಶೇಕ್ ಬಿನ್ ದಾದಾಪೀರ್ ಎಂಬುವರು ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ಹಣವನ್ನು ಎಫ್‍ಎಸ್‍ಟಿ ತಂಡ ತಪಾಸಣೆ ನಡೆಸಿ, ಹಣ ವಶಪಡಿಸಿಕೊಂಡಿದೆ.
ಜಪ್ತಿ ಪಡಿಸಿಕೊಂಡ ಹಣವನ್ನು ನಗದು ವಶಪಡಿಸಿಕೊಳ್ಳುವ ಪರಿಹಾರ ಸಮಿತಿ ಗಮನಕ್ಕೆ ತಂದಿದ್ದು, ಈ ಹಣವನ್ನು ಚಳ್ಳಕೆರೆಯ ಉಪ ಖಜಾನೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ತಿಳಿಸಿದ್ದಾರೆ.












Click it and Unblock the Notifications