10 ರೂಪಾಯಿ ನಾಣ್ಯ ನಕಲಿಯಲ್ಲ; ಚಾಮರಾಜನಗರ ಜಿಲ್ಲಾಧಿಕಾರಿ ಸ್ಪಷ್ಟನೆ
ಚಾಮರಾಜನಗರ, ನವೆಂಬರ್, 07: 10 ರೂಪಾಯಿ ನಾಣ್ಯವನ್ನು ಎಲ್ಲಿಯೂ ಪಡೆಯುತ್ತಿರಲಿಲ್ಲ. ಏಕೆಂದರೆ ಇದು ರದ್ದಾಗಿದೆ ಎನ್ನುವ ವದಂತಿಗಳು ಹರಡಿದ್ದವು. ಇದೇ ಜನರ ಮನಸ್ಸಲ್ಲಿ ಕುಳಿತುಕೊಂಡಿದ್ದು, ಯಾರೇ ಈ ನಾಣ್ಯವನ್ನೂ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ, ಇದು ರದ್ದಾಗಿಲ್ಲ, ಚಲಾವಣೆಯಲ್ಲಿದೆ ಎಂದು ಅಧಿಕಾರಿಗಳು ಮನವರಿಕೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
ಸಾರ್ವಜನಿಕರು ದಿನನಿತ್ಯದ ವಹಿವಾಟುಗಳಲ್ಲಿ 10 ರೂಪಾಯಿ ನಾಣ್ಯಗಳನ್ನು ಬಳಸಬೇಕು. ಈ ಸಂಬಂಧ ಇರುವ ಆಧಾರ ರಹಿತ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.

10 ರೂಪಾಯಿ ಬೆಲೆಯ ನಕಲಿ ನಾಣ್ಯಗಳು ಚಾಲ್ತಿಯಲ್ಲಿವೆ ಎಂಬ ವದಂತಿಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ತಪ್ಪು ಮಾಹಿತಿಯಿಂದಾಗಿ ಜನಸಾಮಾನ್ಯರು 10 ರೂಪಾಯಿ ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುತ್ತಿರುವುದು ಗಮನಕ್ಕೆ ಬಂದಿದೆ. 10 ರೂಪಾಯಿ ನಾಣ್ಯವು ರಿಸರ್ವ್ ಬ್ಯಾಂಕ್ ನೀಡಿದ ಕಾನೂನು ಬದ್ದ ಮತ್ತು ದೇಶಾದ್ಯಂತ ಬಳಕೆಗೆ ಮಾನ್ಯವಾಗಿರುತ್ತದೆ ಎಂದು ಸ್ಪಷ್ಟ ಪಡಿಸುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ದೈನಂದಿನ ವಹಿವಾಟುಗಳಲ್ಲಿ ಈ ನಾಣ್ಯವನ್ನು ಸ್ವೀಕರಿಸಲಾಗುತ್ತಿದೆ ಮತ್ತು ಬಳಸಲಾಗುತ್ತಿದೆ ಎಂದು ಡಿಸಿ ಹೇಳಿದ್ದಾರೆ
ಸಾರ್ವಜನಿಕರು ದಿನನಿತ್ಯದ ವಹಿವಾಟುಗಳಲ್ಲಿ 10 ರೂಪಾಯಿ ನಾಣ್ಯಗಳನ್ನು ಬಳಸುವುದನ್ನು ಮುಂದುವರೆಸಬೇಕು. ಸಾಮಾನ್ಯ ಆರ್ಥಿಕ ಚಟುವಟಿಕೆ ಅಡ್ಡಿಪಡಿಸುವ ಆಧಾರ ರಹಿತ ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಕಂಡಕ್ಟರ್, ಆಟೋ ಚಾಲಕರು, ಹೋಟೆಲ್, ರೆಸ್ಟೋರೆಂಟ್, ಇಂದಿರಾ ಕ್ಯಾಂಟೀನ್, ಆಸ್ಪತ್ರೆ, ಮೆಡಿಕಲ್ ಶಾಪ್, ಚಲನಚಿತ್ರಮಂದಿರ, ಬೀದಿ ವ್ಯಾಪಾರಿಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಬಂಧಿತ ಸಂಸ್ಥೆಗಳು 10 ರೂಪಾಯಿ ನಾಣ್ಯವನ್ನು ಸ್ವೀಕರಿಸಬೇಕು ಮತ್ತು ಚಲಾವಣೆ ಮಾಡಬೇಕುಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
₹2.24 ಕೋಟಿ ಸಂಗ್ರಹ: ಹನೂರು ತಾಲ್ಲೂಕಿನಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇನ್ನು ಈ ಬೆಟ್ಟಕ್ಕೆ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ ಕೇವಲ 5 ದಿನಗಳ ಅವಧಿಯಲ್ಲಿ 2.24 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎನ್ನವ ಮಾಹಿತಿ ಲಭ್ಯವಾಗಿದೆ.
ದೀಪಾವಳಿ ಜಾತ್ರಾ ಮಹೋತ್ಸವ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹುಲಿ ವಾಹನ, ರುದ್ರಾಕ್ಷಿ ವಾಹನ ಬಸವ ಮಂಟಪ, ಲಾಡು ಮಾರಾಟ, ವಿವಿಧ ಸೇವೆಗಳು ಅಕ್ಕಿ ಸೇವೆ, ಮಿಶ್ರ ಪ್ರಸಾದ, ಪುದುವಟ್ಟು, ಮಾಹಿತಿ ಕೇಂದ್ರ ಹಾಗೂ ತಾಳಬೆಟ್ಟ ಭವನಗಳಿಂದ, ಪಾರ್ಕಿಂಗ್, ಕಲ್ಲು ಸಕ್ಕರೆ ,ತೀರ್ಥ, ಬ್ಯಾಗ್ ಮಾರಾಟದಿಂದ 2,24,91,122 ರೂಪಾಯಿ ಆದಾಯ ಬಂದಿದೆ.
5 ದಿನಗಳ ಅವಧಿಯಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ಭೇಟಿ ಕೊಟ್ಟಿದ್ದು, ವಿವಿಧ ಉತ್ಸವಗಳಾದ 1,825 ಚಿನ್ನದ ರಥೋತ್ಸವ, 111 ಬೆಳ್ಳಿ ರಥೋತ್ಸವ, 1,279 ಬಸವ ವಾಹನ, 9,558 ಹುಲಿ ವಾಹನ, 427 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಕೆ ಮೂಲಕ ಹೆಚ್ಚು ಆದಾಯ ಬಂದಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ಮಂಗಳವಾರ ಮಾಹಿತಿ ನೀಡಿದ್ದಾರೆ.
ನವೆಂಬರ್ 4ರಿಂದ ಕಾರ್ತಿಕ ಮಾಸ ಪ್ರಾರಂಭವಾಗಿದ್ದು, ಅಯ್ಯಪ್ಪ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಇನ್ನು ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ, ಯುಗಾದಿ ಹಾಗೂ ದೀಪಾವಳಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಮಾರ್ಚ್ ತಿಂಗಳಲ್ಲಿ ನಡೆದ ಮಹಾಶಿವರಾತ್ರಿ ಜಾತ್ರೆ ಸಂದರ್ಭದಲ್ಲಿ ಆರು ದಿನಗಳ ಅವಧಿಯಲ್ಲಿ 3.24 ಕೋಟಿ ರೂಪಾಯಿ ಆದಾಯ ಹರಿದುಬಂದಿತ್ತು.












Click it and Unblock the Notifications