ಚಾಮರಾಜನಗರ: ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹಾವುಗಳ ರಕ್ಷಣೆ: ಜನರಿಗೆ ಉರಗ ತಜ್ಞ ಮಾಡಿದ ಮನವಿ ಏನು?
ಚಾಮರಾಜನಗರ, ಡಿಸೆಂಬರ್, 18: ಬಾವಿಯೊಳಗೆ ಬಿದ್ದು ಒದ್ದಾಡಿದ ಹಾವುಗಳನ್ನು ಬರೋಬ್ಬರಿ 3 ತಾಸು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿರುವ ಘಟನೆ ಯಳಂದೂರಿನಲ್ಲಿ ನಡೆದಿದೆ.
ಯಳಂದೂರು ಪಟ್ಟಣದ ಬಳೆಪೇಟೆಯ ರಾಜು ಎಂಬವರ ಮನೆ ಸಮೀಪ ಇದ್ದ ಬಾವಿಯಲ್ಲಿ ಭಾರೀ ಗಾತ್ರದ ಎರಡು ವಿಷಪೂರಿತ ಮಂಡಲ ಹಾವುಗಳು ಬಿದ್ದ ವಿಚಾರ ಅರಿತ ಉರಗ ಪ್ರೇಮಿ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ ಸ್ಥಳಕ್ಕೆ ತೆರಳಿ ಅವುಗಳನ್ನು ರಕ್ಷಣೆ ಮಾಡಿದ್ದಾರೆ.
ರಾತ್ರಿ ವೇಳೆಯಲ್ಲಿ ಬಾವಿಗೆ ಎರಡು ಹಾವುಗಳು ಬಾವಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. ಸ್ನೇಕ್ ಮಹೇಶ್ 3 ತಾಸು ಕಾರ್ಯಾಚರಣೆ ಕೈಗೊಂಡು ಸುರಕ್ಷಿತವಾಗಿ ಮೇಲಕ್ಕೆತ್ತಿ ಹಾವುಗಳನ್ನು ಕಾಡಿಗೆ ಬಿಟ್ಟರು ಎಂದು ತಿಳಿದುಬಂದಿದೆ.

ಮಂಡಲದ ಹಾವುಗಳು ವಿಷಪೂರಿತ
ಈ ಕುರಿತು ಸ್ನೇಕ್ ಮಹೇಶ್ ಪ್ರತಿಕ್ರಿಯೆ ನೀಡಿದ್ದು, ಮಂಡಲ (Russell viper) ಹಾವು ಭಾರತದ Big four venomous snake ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಾವು ಕಡಿತದಿಂದ ಮೃತಪಡುವ ಜನರಲ್ಲಿ ಹೆಚ್ಚಿನ ಜನ ಈ ಕೊಳಕು ಮಂಡಲದ ಜೊತೆಗೆ ನಾಗರಹಾವು, ಕಟ್ಟಾವು ಹಾಗೂ ಗರಸಗ ಮಂಡಲ ಎಂಬ ನಾಲ್ಕು ಹಾವುಗಳ ಕಡಿತದಿಂದ ಮಾತ್ರ ಸಾವನ್ನಪ್ಪುತ್ತಾರೆ ಎಂದು ತಿಳಿಸಿದರು.
ವಿಷರಹಿತವಿರಲಿ ಅಥವಾ ವಿಷಕಾರಿ ಇರಲಿ, ಹಾವುಗಳು ಪರಿಸರ ಸಮತೋಲನದಲ್ಲಿ ಇತರ ಜೀವಿಗಳಂತೆ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದ್ದಾರೆ. ನಾಗರ ಪಂಚಮಿ ಹಾಗೂ ಷಷ್ಠಿ ದಿನದಂದು ಯಾರೂ ಹುತ್ತಗಳಿಗೆ ಹಾಲು, ಹಣ್ಣು ಹಾಕಬೇಡಿ, ಹಾಲು, ಹಣ್ಣು ಹಾಕುವುದೇ ಹಾವುಗಳಿಗೆ ತೊಂದರೆ ಎಂದು ಮನವಿ ಮಾಡಿದ್ದಾರೆ.
ವಿಭಿನ್ನ ಷಷ್ಠಿ ಆಚರಣೆ
ನಾಡಿನೆಲ್ಲೆಡೆ ಇಂದು ಶ್ರದ್ಧಾ-ಭಕ್ತಿಯಿಂದ ಷಷ್ಠಿ ಆಚರಣೆ ಮಾಡುತ್ತಿದ್ದು, ಅದರಂತೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ಷಷ್ಠಿಯನ್ನು ವಿಭಿನ್ನವಾಗಿ ಹಲವರು ಆಚರಿಸಿ ಗಮನ ಸೆಳೆದಿದ್ದಾರೆ.
ಹಾವಿನ ಹುತ್ತಕ್ಕೆ ಹಾಲು, ಬೆಣ್ಣೆ, ಪಂಚಾಮೃತದ ತನಿ ಎರೆಯುವುದು ಸಾಮಾನ್ಯ. ಆದರೆ, ಚಾಮರಾಜನಗರ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಮೊಟ್ಟೆಯನ್ನು ಅರ್ಪಿಸಿ ಭಕ್ತಿ-ಭಾವದಿಂದ ನಾಗಪ್ಪನಿಗೆ ನಮಿಸಿದ್ದಾರೆ. ಇನ್ನು ನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿದ್ದಾರೆ.
ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನು ಹುತ್ತದೊಳಗೆ ಹಾಕುತ್ತಾರೆ. ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿದ್ದು, ಪೂಜೆ ಆಗುವವರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ.
ಕೋಳಿ ಬಲಿಕೊಟ್ಟರೆ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ ಎಂದು ಹಲವರ ನಂಬಿಕೆಯಾಗಿದ್ದು, ಅದರಂತೆ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇನ್ನು, ಕೋಳಿ ಬಲಿ ಕೊಡದವರು ಹುತ್ತಕ್ಕೆ ಹಣ್ಣು, ಹಾಲು, ಬೆಣ್ಣೆ, ತುಪ್ಪ ಅರ್ಪಿಸಿ ಸುಬ್ರಹ್ಮಣ್ಯ ಷಷ್ಠಿ ಆಚರಣೆ ಮಾಡಿದ್ದಾರೆ.
{document1}












Click it and Unblock the Notifications