ಗುಂಡ್ಲುಪೇಟೆಯಲ್ಲಿ ರೈತರಿಗೆ ನೆಮ್ಮದಿ ತಂದ ಮಳೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಂಗಳವಾರ ಒಳ್ಳೆ ಮಳೆಯಾಗಿದೆ. ಇದರಿಂದ ರೈತರಲ್ಲಿ ಆಶಾಭಾವ ಮೂಡಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲೂ ಪ್ರಾಣಿಗಳಿಗೆ ನೀರು ದೊರಕಲು ಅನುಖೂಲವಾಗಿದೆ.
ಗುಂಡ್ಲುಪೇಟೆ, ಮಾರ್ಚ್ 21: ಬಂಡೀಪುರ ಅರಣ್ಯ ವಲಯ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಮಳೆ ಸುರಿದಿದ್ದು, ಬಿಸಿಲಿನಿಂದ ಬಸವಳಿದ್ದ ಜನ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಂಡೀಪುರ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಒಂದಿಷ್ಟು ಮಳೆ ಬಂದಿತ್ತಾದರೂ ಮತ್ತೆ ಬಿಸಿಲಿನ ಧಗೆಯಿಂದಾಗಿ ಜನ ಬೇಸತ್ತಿದ್ದರು. ಇನ್ನು ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದಿದ್ದರಿಂದ ಕುರುಚಲು ಕಾಡು ಸೇರಿದಂತೆ ಮರಗಿಡಗಳು ಸುಟ್ಟು ಕರಕಲಾಗಿದ್ದವು.

ಇದೀಗ ಮಳೆ ಬಂದಿರುವುದರಿಂದ ಒಂದಷ್ಟು ವಾತಾವರಣ ತಂಪಾಗಿದೆ. ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯುವುದರೊಂದಿಗೆ ಮಳೆಗಾಲದ ವಾತಾವರಣವನ್ನು ನಿರ್ಮಿಸಿತ್ತು. ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ಹಂಗಳ, ದೇವರಹಳ್ಳಿ, ಶಿವಪುರ, ಅಣ್ಣೂರುಕೇರಿ, ಶಿಂಡನಪುರ, ಕಗ್ಗಳ, ತೆರಕಣಾಂಬಿ ಸುತ್ತಮುತ್ತ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.[ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?]
ಬಂಡೀಪುರ ರಾಷ್ಟ್ರೀಯ ಉದ್ಯಾನದ ಕೆಲವೆಡೆ ಮಳೆ ಬಂದಿದೆಯಾದರೂ 13ನೇ ವಲಯಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಇದರಿಂದ ಕೆರೆಗಳಿಗೆ ನೀರು ಹರಿದು ಬಂದು, ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಒಂದಷ್ಟು ಪರಿಹಾರ ದೊರೆತಂತಾಗಿದೆ.
ಇನ್ನು ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಹಾಗೂ ಕುಂದಕೆರೆ ವಲಯಗಳಿಗೆ ಹೆಚ್ಚಿನ ಮಳೆ ಬಿದ್ದಿದ್ದು, ಕೆರೆ-ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಇದರಿಂದ ನೀರು ಮತ್ತು ಆಹಾರ ಹುಡುಕಿಕೊಂಡು ಹೋದ ಪ್ರಾಣಿಗಳು ಮತ್ತೆ ಇತ್ತ ಬರುವಂತಾಗಿದೆ.
ಇದೇ ರೀತಿ ಮಳೆ ಬರುತ್ತಿದ್ದರೆ ರೈತರಿಗೂ ಕೃಷಿ ಚಟುವಟಿಕೆ ಆರಂಭಿಸಲು ಅನುಕೂಲವಾಗುವುದಲ್ಲದೆ, ಅರಣ್ಯದಲ್ಲಿ ಹುಲ್ಲು ಚಿಗುರಿ ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ದೊರಕಲು ಸಾಧ್ಯವಾಗುತ್ತದೆ.












Click it and Unblock the Notifications