ಬತ್ತಿದ ಬಂಡೀಪುರದ ಕೆರೆಕಟ್ಟೆಗಳಿಗೆ ಜೀವ ನೀಡಿದ ವರುಣ!
ಈ ಬಾರಿ ಮಳೆ ಬರುತ್ತದೋ, ಇಲ್ಲವೋ ಎಂದು ಭಯಭೀತರಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಂಡೀಪುರ ವ್ಯಾಪ್ತಿಯಲ್ಲಿ ಸುರಿದ ಮಳೆ ನೆಮ್ಮದಿ ತಂದಿದೆ. ಕಳೆದ ಬಾರಿ ಮಳೆಯಾಗದೆ ಕೆರೆಕಟ್ಟೆಗಳು ತುಂಬಿರಲಿಲ್ಲ.
ಚಾಮರಾಜನಗರ, ಮೇ 22: ಬೆಂಕಿಗೆ ಆಹುತಿಯಾಗಿ ಒಣಗಿ ಬೋರಲಾಗಿದ್ದ ಬಂಡೀಪುರ ಉದ್ಯಾನದ ಅರಣ್ಯದಲ್ಲೀಗ ವರುಣ ಕೃಪೆ ತೋರಿದ ಹಿನ್ನಲೆಯಲ್ಲಿ ಚಿಗುರು ಕಾಣಿಸಿಕೊಂಡಿದೆ. ಬತ್ತಿ ಹೋಗಿದ್ದ ಕೆರೆ ಕಟ್ಟೆಗಳಲ್ಲಿ ನೀರು ತುಂಬುತ್ತಿದೆ.
ಈ ಬಾರಿ ಏನಾಗುತ್ತದೆಯೋ ಎಂದು ಭಯಭೀತರಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಂಡೀಪುರ ವ್ಯಾಪ್ತಿಯಲ್ಲಿ ಸುರಿದ ಮಳೆ ನೆಮ್ಮದಿ ತಂದಿದೆ. ಕಳೆದ ಬಾರಿ ಮಳೆಯಾಗದೆ ಕೆರೆಕಟ್ಟೆಗಳು ತುಂಬಿರಲಿಲ್ಲ. ಪರಿಣಾಮ ಬೇಸಿಗೆಯಲ್ಲಿ ಪ್ರಾಣಿಗಳು ನೀರು ಮತ್ತು ಮೇವಿಗಾಗಿ ಪರದಾಡುವಂತಾಗಿತ್ತಲ್ಲದೆ, ನೀರನ್ನು ಅರಸಿಕೊಂಡು ಅರಣ್ಯದಿಂದ ವಲಸೆ ಹೋಗಿದ್ದವು.[ಗುಂಡ್ಲುಪೇಟೆಯ ದೊಡ್ಡಕೆರೆ, ಚೋಳರ ಕಾಲದ ಕಲ್ಯಾಣಿಯೇ?]
ಇನ್ನು ಕಿಡಿಗೇಡಿಗಳು ಹಚ್ಚಿದ ಬೆಂಕಿ ನೂರಾರು ಎಕರೆ ಅರಣ್ಯವನ್ನು ನಾಶ ಮಾಡಿದ್ದರಿಂದ ಸಸ್ಯಹಾರಿ ಪ್ರಾಣಿಗಳು ಹಸಿರು ಮೇವು ಅರಸಿಕೊಂಡು ದೂರ ಹೋಗಿದ್ದವು. ಅಳಿದುಳಿದ ಪ್ರಾಣಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಬೋರ್‍ವೆಲ್ ಕೊರೆಯಿಸಿ ಸೋಲಾರ್ ಮೋಟಾರ್ ಮೂಲಕ ನೀರನ್ನು ಕೆರೆಗೆ ತುಂಬಿಸುವ ಕಾರ್ಯವನ್ನು ಕೈಗೊಂಡಿತ್ತು.
ಇದೆಲ್ಲದರ ನಡುವೆ ಕಳೆದೊಂದು ವಾರದಲ್ಲಿ ಗುಂಡ್ಲುಪೇಟೆ ತಾಲೂಕಿನಾದ್ಯಂತ ಅದರಲ್ಲೂ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಅರಣ್ಯದ ನಡುವೆ ಇರುವ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿದೆ.

ತುಂಬಿತು ಕೆರೆ
ಅರಣ್ಯ ಇಲಾಖೆ ಮೂಲಗಳ ಪ್ರಕಾರ ಬಂಡೀಪುರ ವಲಯದಲ್ಲಿ ಸುಮಾರು 55 ಕೆರೆಗಳಿದ್ದು, ಅವುಗಳ ಪೈಕಿ ಸುಮಾರು 20 ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಗೋಪಾಲಸ್ವಾಮಿಬೆಟ್ಟದ ವ್ಯಾಪ್ತಿಯಲ್ಲಿ 30 ಕೆರೆಗಳಿದ್ದು 15 ಕೆರೆಗಳಿಗೆ ನೀರು ಹರಿದು ಬಂದಿದೆ. ಕುಂದಕೆರೆಯಲ್ಲಿರುವ 11 ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.[ಬರದಲ್ಲೂ ಬಂಡೀಪುರದ ಮೂರು ಕೆರೆಗಳಿಗೆ ನೀರು ಬಂತು!]

ನೀರುತುಂಬಿ ನಳನಳಿಸುತ್ತಿವೆ ಕೆರೆಗಳು
ಕುಂಟಬಸಪ್ಪನಕಟ್ಟೆ, ಹೊಸಕೆರೆ, ಕಾಳೀಕಟ್ಟೆ, ದೊಡ್ಡಕೆರೆ, ಚಿಗರುಮಡುವಿನಕಟ್ಟೆಗಳು ಭರ್ತಿಯಾಗಿವೆ. ಮೂಲೆಹೊಳೆ ವಲಯದ 30 ಕೆರೆಗಳಲ್ಲಿ ಸುಮಾರು 15 ಕೆರೆ ತುಂಬಿದೆ. ನವಿಲುಕೆರೆ, ಮಡಕೆರೆಯಲ್ಲಿ ಜೀವಜಲ ಕಾಣಿಸಿದೆ.[ಬತ್ತಿದ ಬಂಡೀಪುರದ ಮೂಲೆಹೊಳೆ: ಜನ-ಜಾನುವಾರು ಪರದಾಟ]

ಉಕ್ಕುತ್ತಿದೆ ಜೀವಜಲ
ಮೊಳೆಯೂರು ವಲಯದ 13 ಕೆರೆಗಳಲ್ಲಿ 9 ಕೆರೆಗಳು, ಸೀಗೆವಾಡಿಕೆರೆ ದೊಡ್ಡದಾಸನಕಟ್ಟೆಕೆರೆ, ಯಡಿಯಾಲದ 26 ಕೆರೆಗಳಲ್ಲಿ 21 ಕೆರೆಗಳು, ಓಂಕಾರ ವಲಯದ 33 ಕೆರೆಗಳು ನೀರು ತುಂಬಿ ಕಂಗೊಳಿಸುತ್ತಿವೆ. ಶಂಭುಕಟ್ಟೆ, ಮರಿಗೌಡನಕಟ್ಟೆ, ಅಂಕಪ್ಪನಕಟ್ಟೆ, ಶಾಂತಕಟ್ಟೆ, ಹಾಳಕಟ್ಟೆ, ಜಮ್ಮನಗಟ್ಟೆ ಮೊದಲಾದವುಗಳು ಬೇಸಿಗೆಯ ಬಿಸಿಲಿಗೆ ತತ್ತರಿಸಿ ಹೋಗಿದ್ದರೂ ಇದೀಗ ಮಳೆ ಬಂದಿದ್ದರಿಂದ ತುಂಬಿವೆ.

ರೈತಾಪಿ ವರ್ಗಕ್ಕೆ ನೆಮ್ಮದಿಯ ಸುಗ್ಗಿ
ಈ ಬಾರಿ ಉತ್ತಮವಾಗಿ ಮುಂಗಾರು ಆದರೆ ಬರ ನಿರ್ಮೂಲನೆಯಾಗಿ ಮುಂದಿನ ಬೇಸಿಗೆಯಲ್ಲಿ ನೀರಿಗೆ ಕೊರತೆ ಕಾಣಿಸದೆ ರೈತಾಪಿ ವರ್ಗ ಮಾತ್ರವಲ್ಲದೆ, ವನ್ಯ ಪ್ರಾಣಿಗಳು ಕೂಡ ನೆಮ್ಮದಿಯಾಗಿ ಜೀವಿಸಬಹುದೇನೋ![ಚರಂಡಿ ನೀರನ್ನೇ ಹೊತ್ತೊಯ್ದ ಹಂಗಳ ಗ್ರಾಮಸ್ಥರು!]

ಮರಳಿ ಗೂಡಿಗೆ
ಈಗ ಮಳೆ ಬಂದು ಒಂದಷ್ಟು ಕೆರೆಕಟ್ಟೆ ತುಂಬಿರುವುದರಿಂದ ನೀರನ್ನರಿಸಿಕೊಂಡು ಕೇರಳ, ತಮಿಳುನಾಡು ಕಡೆಗೆ ವಲಸೆ ಹೋಗಿದ್ದ ಪ್ರಾಣಿಪಕ್ಷಿಗಳು ಮತ್ತೆ ಬಂಡೀಪುರ ಉದ್ಯಾನದತ್ತ ಮರಳುತ್ತಿವೆ ಎನ್ನಲಾಗಿದೆ.[ನೀರಿಲ್ಲ, ಬಸ್ಸಿಲ್ಲ, ಕಣಿಯನಪುರ ಜನರ ಬವಣೆಗೆ ಕೊನೆಯಿಲ್ಲ!]
{promotion-urls}












Click it and Unblock the Notifications