ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರದಲ್ಲೂ ಬಂಡೀಪುರದ ಮೂರು ಕೆರೆಗಳಿಗೆ ನೀರು ಬಂತು!

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿಗಳಿಗೆ ಕುಡಿಯಲು ಅನುಕೂಲವಾಗುವಂತೆ ಕೊಳವೆ ಬಾವಿ ಕೊರೆಯಿಸಿ ಸೋಲಾರ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ.

By ಬಿಎಂ ಲವಕುಮಾರ್
|
Google Oneindia Kannada News

ಚಾಮರಾಜನಗರ, ಮೇ 11: ಒಂದೆಡೆ ಬರದಿಂದ ತತ್ತರಿಸಿ ನೀರಿನ ಮೂಲಗಳೆಲ್ಲ ಬತ್ತಿಹೋಗಿದ್ದರೆ, ಮತ್ತೊಂದೆಡೆ ಕಿಡಿಗೇಡಿಗಳು ಬೆಂಕಿಹಚ್ಚಿದ ಪರಿಣಾಮ ಗುಂಡ್ಲುಪೇಟೆ ಬಳಿಯ ಬಂಡೀಪುರ ಉದ್ಯಾನದ ಅರಣ್ಯ ಸುಟ್ಟುಕರಕಲಾಗಿತ್ತು. ಇದರಿಂದ ಪ್ರಾಣಿಗಳು ಬೇರೆಡೆಗೆ ಪಲಾಯನ ಮಾಡಿದ್ದವು. ಆದರೆ ಇತ್ತೀಚೆಗೆ ಅಲ್ಲಲ್ಲಿ ಮಳೆಯಾದ್ದರಿಂದ ಮರಳಿ ಬರುತ್ತಿವೆ.

ಇನ್ನೊಂದೆಡೆ ಪ್ರಾಣಿಗಳಿಗೆ ಕುಡಿಯಲು ಅನುಕೂಲವಾಗುವಂತೆ ಕೊಳವೆ ಬಾವಿ ಕೊರೆಯಿಸಿ ಸೋಲಾರ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಇಲ್ಲಿ ಸಮಾರೋಪಾದಿಯಲ್ಲಿ ಸಾಗಿದೆ.

3 lakes of Bandipur National Park in Chamarajangar filled up with water

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಈ ಬಾರಿ ನೀರಿಲ್ಲದೆ ವನ್ಯಪ್ರಾಣಿಗಳು ಪರದಾಡುವಂತಾಗಿತ್ತು. ಹೀಗಾಗಿ ಅರಣ್ಯ ಇಲಾಖೆ ಖಾಸಗಿ ಸಂಸ್ಥೆಗಳು ಸೇರಿದಂತೆ ದಾನಿಗಳ ಸಹಾಯ ಪಡೆದು ಕೊಳವೆ ಬಾವಿಯನ್ನು ಕೊರೆಯಿಸಿ ಅದರಿಂದ ನೀರನ್ನು ಸೋಲಾರ್ ಮೋಟಾರ್ ಮೂಲಕ ಕೆರೆಗಳಿಗೆ ತುಂಬಿಸುವ ಕಾಯಕಕ್ಕೆ ಮುಂದಾಗಿದೆ. ಈಗಾಗಲೇ ಮೂರು ಕೆರೆಗಳಿಗೆ ನೀರು ಬರುತ್ತಿದ್ದು ಪ್ರಾಣಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.

ಈ ಬಾರಿಯಂತೂ ನೀರಿಲ್ಲದೆ ಹಾಹಾಕಾರ ಏರ್ಪಟ್ಟಿತ್ತು. ಪರಿಣಾಮ ಜಿಂಕೆ, ಹುಲಿ, ಆನೆ ಮೊದಲಾದ ಪ್ರಾಣಿಗಳು ನೀರನ್ನರಸಿ ಕಬಿನಿ ಜಲಾಶಯ, ತಮಿಳುನಾಡು, ಕೇರಳ ಕಡೆಗೆ ಹೋಗಿದ್ದವು. ಇನ್ನು ಕೆಲವು ಪ್ರಾಣಿಗಳು ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿ ನರಳಿದ್ದವು. ಇದೆಲ್ಲವನ್ನು ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆ ಓಂಕಾರ್ ವಲಯದ ಸೌತ್ ಕೆರೆ, ತಾರಮರದಕಟ್ಟೆ, ತವಳನೆರೆ ಹೊಸಕೆರೆ ವ್ಯಾಪ್ತಿಯಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಿ, ಸೋಲಾರ್ ಮೋಟಾರು ಮೂಲಕ ನೀರನ್ನು ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದು ಅದರಲ್ಲಿ ಯಶಸ್ವಿಯಾಗಿದೆ.

3 lakes of Bandipur National Park in Chamarajangar filled up with water

ಸೌತ್‍ಕೆರೆ ಬಳಿಯ 8.5 ಲಕ್ಷ ರೂ. ವೆಚ್ಚದ ಈ ಯೋಜನೆಗೆ ವಲ್ರ್ಡ್ ವೈಲ್ಡ್ ಲೈಫ್ ಫೌಂಡೇಶನ್ ಸಂಸ್ಥೆಯು ಸೌರ ವಿದ್ಯುತ್ ಫಲಕಗಳು ಹಾಗೂ ಮೋಟಾರನ್ನು ಒದಗಿಸಿ ಸಹಕರಿಸಿದೆ. ಸುಮಾರು 800 ಅಡಿ ಆಳದ ಕೊಳವೆ ಬಾವಿ ಕೊರೆಯಿಸಲಾಗಿದ್ದು, 300 ಅಡಿ ಆಳದವರೆಗೆ ಪೈಪ್ ಅಳವಡಿಸಲಾಗಿದೆ. 18 ಸೌರ ಫಲಕಗಳು ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿವೆ. ಇದರಿಂದ 5 ಅಶ್ವ ಶಕ್ತಿಯ ಮೋಟಾರು ಕಾರ್ಯನಿರ್ವಹಿಸುತ್ತಿದ್ದು, ಬೇಸಿಗೆಯ ಸಂದರ್ಭದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತಾ ಕೆರೆಗೆ ನೀರು ತುಂಬಿಸುತ್ತಿದೆ.

ಇನ್ನೊಂದೆಡೆ ತಾರಮರಕಟ್ಟೆ ಬಳಿ ಅರಣ್ಯ ಇಲಾಖೆ 7 ಲಕ್ಷ ರೂ. ಅನುದಾನದಲ್ಲಿ ಸೋಲಾರ್ ಮೋಟಾರ್ ನಿರ್ಮಿಸಿ ನೀರು ತುಂಬಿಸುತ್ತಿದ್ದರೆ, ತವಳನೆರೆಹೊಸಕೆರೆ ಬಳಿ ವೈದ್ಯರೊಬ್ಬರು 7 ಲಕ್ಷ ರೂ ವೆಚ್ಚದಲ್ಲಿ ಉಚಿತವಾಗಿ ಕೊಳವೆಬಾವಿ ಕೊರೆಯಿಸಿ ಸೋಲಾರ್ ಮೋಟಾರ್ ಅಳವಡಿಸಿಕೊಟ್ಟಿದ್ದಾರೆ. ಇದರಿಂದಾಗಿ ಕೆರೆಗಳಿಗೆ ನೀರು ಹರಿದು ಬರತೊಡಗಿದೆ.

ಇನ್ನು ಕಾಡು ಪ್ರಾಣಿಗಳು ಸ್ಥಳಕ್ಕೆ ಬಂದು ಸೋಲಾರ್ ಫಲಕ ಮತ್ತು ಮೋಟಾರನ್ನು ನಾಶ ಮಾಡುವ ಸಾಧ್ಯತೆ ಇರುವುದರಿಂದಾಗಿ ಫಲಕ ಹಾಗೂ ಮೋಟಾರ್ ಅಳವಡಿಸಿರುವ ಸ್ಥಳದಲ್ಲಿ ಭಾರೀ ಕಂದಕ ಕೊರೆಯಿಸಲಾಗಿದ್ದು, ಮೋಟಾರನ್ನು ಕಬ್ಬಿಣದ ಹಲಗೆಗಳಿಂದ ಮುಚ್ಚಿ ಯಾವುದೇ ಪ್ರಾಣಿ ಸನಿಹಕ್ಕೆ ಸುಳಿಯದಂತೆ ಮಾಡಲಾಗಿದೆ.

ಸದ್ಯ ಅರಣ್ಯದ ಮೂರು ಕೆರೆಗಳ ಬಳಿ ಸೋಲಾರ್ ಮೋಟಾರನ್ನು ಅಳವಡಿಸಿದ್ದರಿಂದ ಪ್ರಾಣಿಗಳಿಗೆ ನೀರಿನ ಬವಣೆ ತಪ್ಪಿದಂತಾಗಿದೆ. ಈ ಬಾರಿ ಮುಂಗಾರಲ್ಲಿ ಉತ್ತಮ ಮಳೆಯಾದರೆ ಮುಂದಿನ ಬೇಸಿಗೆಯಲ್ಲಿ ಪ್ರಾಣಿಗಳ ನೀರಿನ ಬವಣೆ ತಪ್ಪಬಹುದೇನೋ!

English summary
3 lakes of Bandipur National Park in Chamarajangar filled up with water during this summer 2017 with the help of bore-well and solar pumps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X