ಗುಂಡ್ಲುಪೇಟೆ ರಾಘವಾಪುರ ಕೆರೆ: ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ?
ಚಾಮರಾಜನಗರ, ಜನವರಿ 30: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭ ನೀಡಿದ ಹಲವು ಭರವಸೆಗಳಲ್ಲಿ ಕೆರೆಗಳ ಅಭಿವೃದ್ಧಿ ಮತ್ತು ನೀರು ತುಂಬಿಸುವ ಕಾರ್ಯಗಳು ಸೇರಿದ್ದು, ಅದನ್ನು ಈಡೇರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆಯಾದರೂ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಮಾತ್ರ ಜನ ಪ್ರಶ್ನೆ ಮಾಡುವಂತಾಗಿದೆ.
ಇದಕ್ಕೆ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಕೆರೆಯ ಅಭಿವೃದ್ಧಿ ಕಾರ್ಯ ಸಾಕ್ಷಿಯಾಗಿದೆ. ಸರ್ಕಾರ ಕೋಟ್ಯಂತರ ಹಣ ಬಿಡುಗಡೆಗೊಳಿಸಿದ್ದರೂ ಕಳಪೆ ಕಾಮಗಾರಿಯಿಂದಾಗಿ ನೀರು ತುಂಬಿಸುವ ಮೊದಲೇ ಈ ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರೈತರು ಆತಂಕದಲ್ಲಿ ಹಿಡಿಶಾಪ ಹಾಕುವಂತಾಗಿದೆ.
ಕೆರೆಯ ಅಭಿವೃದ್ಧಿ ಕಾಮಗಾರಿಯನ್ನೊಮ್ಮೆ ಹಾಗೆ ಸುಮ್ಮನೆ ನೋಡಿದರೆ ಸಾಕು. ಇಲ್ಲಿ ನಡೆದಿರುವ ಕೆಲಸ ಕಾರ್ಯಗಳು ಕಳಪೆ ಎಂಬುವುದು ಎಂತಹವರಿಗೂ ಗೊತ್ತಾಗಿ ಬಿಡುತ್ತದೆ. ಆದರೆ ದಾಖಲೆಗಳಲ್ಲಿ ಮಾತ್ರ ಈ ಕೆಲಸಕ್ಕೆ ಲಕ್ಷಾಂತರ ರೂ. ಖರ್ಚಾಗಿದೆ. ಈ ವಿಚಾರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಗೆನೋಡಿದರೆ ರಾಘವಾಪುರ ಕೆರೆಯು ಸುಮಾರು 51.41 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿ, ಇದರಲ್ಲಿ ನೀರು ತುಂಬಿದ್ದೇ ಆದರೆ ಸಾವಿರಾರು ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.

ಕಾಟಾಚಾರಕ್ಕೆ ಕಾಮಗಾರಿ
ಈಗಾಗಲೇ ಕೆರೆಯ ಹೂಳು ತೆಗೆಯುವ ಕಾರ್ಯ ಮಾಡಲಾಗಿದೆ. ಜತೆಗೆ ಕೆರೆಗೆ ಏರಿಯನ್ನು ನಿರ್ಮಿಸಲಾಗಿದೆ. ಜನರೇ ಹೇಳುವ ಪ್ರಕಾರ ಕೇವಲ ಕಾಟಾಚಾರಕ್ಕೆ ಕಾಮಗಾರಿ ಮಾಡಲಾಗಿದೆ. ಇದರ ಅಭಿವೃದ್ಧಿ ಕಾಮಗಾರಿಗೆ ಸುಮಾರು 50ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದ್ದರೂ ರಾತ್ರೋರಾತ್ರಿ ಜೆಸಿಬಿ ತಂದು ಹೂಳೆತ್ತುವ ನಾಟಕವಾಡಿ ಹಣವನ್ನು ಗುಳುಂ ಮಾಡಲಾಗಿದೆ ಎಂಬುದು ರೈತರ ಆರೋಪವಾಗಿದೆ.

ಬಿರುಕು ಬಿಟ್ಟ ಕೆರೆ ಏರಿ
ಕೆರೆಗೆ ಏರಿಯನ್ನು ನಿರ್ಮಿಸಲಾಗಿದ್ದು ಅದು ಸಮರ್ಪಕವಾಗಿ ನಡೆಯದ ಕಾರಣ ಈಗಲೇ ಬಿರುಕು ಕಾಣಿಸಿಕೊಂಡಿದೆ. ಈ ಏರಿಯನ್ನು ನಂಬಿ ಕೆರೆಗೆ ನೀರು ತುಂಬಿಸಿದರೆ ಉಳಿಯುತ್ತಾ ಎಂಬುದು ಪ್ರಶ್ನೆಯಾಗಿದೆ. ಕೆರೆಯ ಅಭಿವೃದ್ಧಿ ಕಾಮಗಾರಿ ನಡೆದಿರುವುದನ್ನು ನೋಡಿದರೆ ಅದು ಸಮರ್ಪಕವಾಗಿ ನಡೆದಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಗೀತಾ ಮಹದೇವಪ್ರಸಾದ್ ಭರವಸೆ
ಜಿಲ್ಲಾ ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ ರಾಘವಾಪುರ ಕೆರೆಗೆ ನೀರು ತುಂಬಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಯಾವಾಗ ಕೆರೆಗೆ ನೀರು ಬರುತ್ತೋ? ಎಂದು ಕಾಯುತ್ತಿರುವ ರೈತರು ಜತೆಯಲ್ಲೇ ನೀರು ತುಂಬಿಸಿದರೂ ಕರೆಯಲ್ಲಿ ಉಳಿಯುತ್ತಾ ಎಂಬ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹಣ ದುರುಪಯೋಗದ ಆರೋಪ
ಇತ್ತೀಚೆಗೆ ಸುಮಾರು 50 ಲಕ್ಷ ರೂಪಾಯಿ ಅಂದಾಜು ಮೊತ್ತದಲ್ಲಿ ಹೂಳೆತ್ತುವ ಕಾಮಗಾರಿಗೆ 50ಲಕ್ಷ ಬಿಡುಗಡೆಯಾಗಿದ್ದು, ಆದರೆ ಈ ವೆಚ್ಚದಲ್ಲಿ ಕಾಮಗಾರಿ ನಡೆದಂತೆ ಕಾಣುತ್ತಿಲ್ಲ. ಕಡಿಮೆ ಖರ್ಚಿನಲ್ಲಿ ರಾತ್ರೋ ರಾತ್ರಿ ಜೆಸಿಬಿ ಯಂತ್ರದಲ್ಲಿ ಕಳಪೆ ಕಾಮಗಾರಿ ಮಾಡಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ರೈತರದ್ದಾಗಿದೆ. ಕೆರೆಗೆ ಶೀಘ್ರವಾಗಿ ನೀರು ಬಿಡಲಾಗುತ್ತದೆ ಎಂದು ಸಚಿವರು ಹೇಳುತ್ತಾರೆ. ಆದರೆ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಮಾಡದ ಕಾರಣ ಮುಂದೆ ಏನಾದೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.












Click it and Unblock the Notifications