ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಕ್ರಾಂತಿ ಜಾತ್ರೆಗೆ ಸಿದ್ಧತೆ: ವಾಹನ ಪ್ರವೇಶ ನಿರ್ಬಂಧ
ಚಾಮರಾಜನಗರ, ಜನವರಿ 09: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಈ ಬಾರಿ ಸಂಕ್ರಾಂತಿ ಚಿಕ್ಕಜಾತ್ರೆಯು ಜನವರಿ 15ರಂದು ನಡೆಯುತ್ತಿದ್ದು, ಜಾತ್ರೆಗೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಜಾತ್ರೆ ಸುಸೂತ್ರವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಳಿಗಿರಿರಂಗನಬೆಟ್ಟದ ಅತಿಗಣ್ಯರ ಪ್ರವಾಸಿ ಮಂದಿರದಲ್ಲಿ ಜಾತ್ರೆಯ ಪೂರ್ವಭಾವಿ ಸಿದ್ಧತೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದರು. ಅಲ್ಲದೇ ಜಾತ್ರೆ ಸಂಬಂಧ ಮಾಡಬೇಕಾದ ಕೆಲಸ ಕಾರ್ಯಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ, ಸಲಹೆಗಳನ್ನು ನೀಡಿ, ರಥೋತ್ಸವ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳಲು ಹೇಳಿದರು.

ಈ ವೇಳೆ ಮಾತನಾಡಿದ ಶಾಸಕರು, 'ಸಂಕ್ರಾಂತಿ ಹಬ್ಬದ ಮರುದಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಚಿಕ್ಕತೇರು ನಡೆಯುತ್ತದೆ. ಈ ಬಾರಿ ಜನವರಿ 15ರ ಬುಧವಾರ ಮಧ್ಯಾಹ್ನ 11.55 ರಿಂದ 12.06 ರೊಳಗೆ ಸಲ್ಲುವ ಮೀನಾ ಲಗ್ನದಲ್ಲಿ ರಥಾರೋಹಣ ಆರಂಭವಾಗಲಿದೆ. ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ತೊಂದರೆಯಾಗದಂತೆ ಕುಡಿಯುವ ನೀರು, ನಿರಂತರ ವಿದ್ಯುತ್, ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಿ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಥೋತ್ಸವದಂದು ವಾಹನ ಪ್ರವೇಶ ನಿರ್ಬಂಧ
ಜಾತ್ರೆಗೆ ಭಕ್ತರು ಆಗಮಿಸಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು. ಈ ಬಾರಿ ರಥೋತ್ಸವಕ್ಕೆ ರಾಜ್ಯ ಮಾತ್ರವಲ್ಲದೇ ಹೊರಗಿನಿಂದಲೂ ಜನರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಖಾಸಗಿ ವಾಹನದಲ್ಲಿ ಬರುವವರಿಗೆ ವಾಹನ ನಿಲುಗಡೆಗೆ ನಿಗದಿತ ಸ್ಥಳವನ್ನು ಸೂಚಿಸಿ ಅಲ್ಲಿಂದ ಭಕ್ತರು ವಿಶೇಷ ಬಸ್‌ಗಳಲ್ಲಿ ದೇಗುಲಕ್ಕೆ ತೆರಳು ಅವಕಾಶ ಮಾಡಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಇದೆಲ್ಲದರ ನಡುವೆ ರಥೋತ್ಸವದಿಂದ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುವುದರಿಂದ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದ್ದು, ಇದರ ತಡೆಗೆ ರಥೋತ್ಸವದಂದು ದ್ವಿಚಕ್ರ, ತ್ರಿಚಕ್ರ ಹಾಗೂ ಗೂಡ್ಸ್ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಬಿಳಿಗಿರಿರಂಗನ ಬೆಟ್ಟದತ್ತ ಬರುವವರು ತಾಲೂಕಿನ ಅರಣ್ಯ ಇಲಾಖೆಯ ಗುಂಬಳ್ಳಿ ಚೆಕ್ ಪೋಸ್ಟ್ ಬಳಿ ತಮ್ಮ ವಾಹನ ನಿಲ್ಲಿಸಿ ಅಲ್ಲಿಂದ ಬಸ್‌ಗಳಲ್ಲೇ ತೆರಳಬೇಕಾಗುತ್ತದೆ.
ಸಂಕ್ರಾಂತಿ ಹಬ್ಬದ ಮಾರನೆಯ ದಿನ ರಥೋತ್ಸವ ನಡೆಯುತ್ತಿರುವುದರಿಂದ ಅದಕ್ಕಿಂತ ಮೊದಲೇ ಸಂಕ್ರಾಂತಿ ಹಬ್ಬದ ದಿನದಂದೇ ಭಕ್ತರು ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಲು ತಿಳಿಸಲಾಯಿತು. ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.












Click it and Unblock the Notifications