R. Dhruvanarayana: ಹೆಗ್ಗವಾಡಿ ಗ್ರಾಮದಲ್ಲಿ ಆರ್.ಧ್ರುವನಾರಾಯಣ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಚಾಮರಾಜನಗರ, ಮಾರ್ಚ್, 12: ಚಾಮರಾಜನಗರದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಪಾರ್ಥೀವ ಶರೀರವನ್ನು ಚಾಮರಾಜನಗರಕ್ಕೆ ರಾತ್ರಿ 12:30ರ ಸುಮಾರಿಗೆ ತಲುಪಿತು. ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ಭಜನೆ, ಹಾಡುಗಳ ಮೂಲಕ ದುಃಖವನ್ನು ತೋಡಿಕೊಂಡರು.
ಶನಿವಾರ (ಮಾರ್ಚ್ 11)ರಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಪಾರ್ಥೀವ ಶರೀರವನ್ನು ತರಬೇಕೆಂದು ಕೊಂಡಿದ್ದರು. ಆದರೆ ಸಾವಿರಾರು ಮಂದಿ ಮೈಸೂರಿನಲ್ಲಿ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರಿಂದ ರಾತ್ರಿ 12:30ರ ಸುಮಾರಿಗೆ ಚಾಮರಾಜನಗರಕ್ಕೆ ತಲುಪಿತು. ಮುತ್ತಿಗೆ, ಬದನಗುಪ್ಪೆ, ಬೆಂಡರವಾಡಿ ಸೇರಿದಂತೆ ದಾರಿಯುದ್ದಕ್ಕೂ ತನ್ನ ನೆಚ್ಚಿನ ನಾಯಕನಿಗೆ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ಇನ್ನು ಅಂತಿಮ ನಮನ ಸಲ್ಲಿಸಲು ಸಾವಿರಾರು ಮಂದಿ ಮಧ್ಯರಾತ್ರಿ ತನಕವೂ ಕಾದು ಕೊನೆಯ ದರ್ಶನ ಪಡೆದರು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಿಂದ ಆರಂಭವಾದ ಮೆರವಣಿಗೆ, ಸತ್ತಿ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಗೆ ತಲುಪಿ ಪಕ್ಷದ ವತಿಯಿಂದ ನಮನ ಸಲ್ಲಿಸಿ ಹರವೆ ಗ್ರಾಮದ ಮಾರ್ಗವಾಗಿ ಸ್ವಗ್ರಾಮ ಹೆಗ್ಗವಾಡಿ ತಲುಪಿತು. ಅಂತಿಮ ಯಾತ್ರೆಯಲ್ಲಿ ಧ್ರುವನಾರಾಯಣ ಪುತ್ರ ದರ್ಶನ್, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಮತ್ತಿತರರು ಇದ್ದರು.
ಚಾಮರಾಜನಗರ ಜಿಲ್ಲೆಯಾದ್ಯಂತ ಧ್ರುವನಾರಾಯಣ ಅವರ ಕೌಟೌಟ್ ಅಳವಡಿಸಿ ಮೌನಾಚರಣೆ ಮಾಡಿರುವ ಅಭಿಮಾನಿಗಳು ಅಶೃತರ್ಪಣ ಅರ್ಪಿಸಿದ್ದಾರೆ. ಹೆಗ್ಗವಾಡಿ ಗ್ರಾಮದಲ್ಲಿ ಭಾನುವಾರ ಮಧ್ಯಾನ (ಮಾರ್ಚ್ 12) ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಧ್ರುವನಾರಾಯಣ
ಹಳೇ ಮೈಸೂರು ಭಾಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಂತರದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿರುವುದು ಕಾಂಗ್ರೆಸ್ ಪಕ್ಷದ ಮೇಲೆ ಭಾರೀ ಪರಿಣಾಮ ಬೀರಲಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದ ಆರ್.ಧ್ರುವನಾರಾಯಣ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕಾಗಿ ತರಲೇ ಬೇಕೆಂಬ ಹಠಕ್ಕೆ ಬಿದ್ದಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಶ್ರೀನಿವಾಸ ಪ್ರಸಾದ್ ಅವರ ಎದುರು ಚಾಮರಾಜನಗರದಲ್ಲಿ ಸೋಲು ಕಂಡಿದ್ದ ಅವರು ಆ ನಂತರ ಅವರು ಸುಮ್ಮನೆ ಕೂರಲಿಲ್ಲ. ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸತೊಡಗಿದ್ದರು.
ಅದರಲ್ಲೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಂದ ಆರಂಭವಾಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಇಳಿದರು. ಸ್ಥಳೀಯ ನಾಯಕರನ್ನು ಭೇಟಿ ಮಾಡಿ ಸಭೆಗಳನ್ನು ನಡೆಸಲು ಆರಂಭಿಸಿದರು. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಾಯಕರು ಸಂಘಟನೆಯಿಂದ ದೂರವುಳಿದಿದ್ದ ಕಾಲದಲ್ಲಿ ಏಕಾಂಗಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ.












Click it and Unblock the Notifications