ಪ್ರವೀಣ್ ಹತ್ಯೆ: ಚಾಮರಾಜನಗರಲ್ಲೂ ರಾಜೀನಾಮೆ ಚಳವಳಿ
ಚಾಮರಾಜನಗರ, ಜುಲೈ, 28: ಚಾಮರಾಜನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರವೀಣ್ ಹತ್ಯೆ ಖಂಡಿಸಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ವರಿಷ್ಠರ ವಿರುದ್ಧ ತಿರುಗಿಬಿದ್ದಿದ್ದು, ರಾಜೀನಾಮೆ ಚಳವಳಿ ಆರಂಭಿಸಿದ್ದಾರೆ.
ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್ ತಮ್ಮ ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸ್ಥಾನಕ್ಕೆ, ನಗರಸಭೆ ಸದಸ್ಯ ಸಿಎಂ ಶಿವರಾಜು ನಗರ ಮಂಡಲ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇನ್ನು ಜಿಲ್ಲಾ ಆರೋಗ್ಯ ಸಮಿತಿಯ ಸುಂದರ್ ರಾಜು, ಆರ್.ಎಲ್.ನಾಗೇಂದ್ರ, ಎಸ್.ಟಿ.ಮೋರ್ಚಾ ಟೌನ್ ಅಧ್ಯಕ್ಷ ಚಂದ್ರಶೇಖರ್, ಸುದರ್ಶನ್ ಆಳ್ವ, ಆರಾಧನಾ ಸಮಿತಿ ನಿರ್ದೇಶಕ ರಮೇಶ್ ನಾಯಕ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಗುಂಡ್ಲುಪೇಟೆ ಮಂಡಲ ಕಾರ್ಯದರ್ಶಿ ಸ್ಥಾನಕ್ಕೆ ಶಾಂತಪ್ಪ ದೊಡ್ಡತುಪ್ಪೂರು ರಾಜೀನಾಮೆ ಸಲ್ಲಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಎಫ್‌ಬಿ ಅಲ್ಲಿ ಹಾಕಿಕೊಂಡಿದ್ದಾರೆ. ಇದರ ಜೊತೆಗೆ ನಮಗೆ ರಕ್ಷಣೆಯಿಲ್ಲದ ವ್ಯವಸ್ಥೆಯಲ್ಲಿ ಇರಲು ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇವರೊಟ್ಟಿಗೆ ಹಲವರು ಕಾರ್ಯಕರ್ತ ಸ್ಥಾನದಿಂದ ವಿಮುಕ್ತಿ ಹೊಂದುವುದಾಗಿ ಘೋಷಿಸಿಕೊಂಡಿದ್ದಾರೆ.

ರಾಜ್ಯದ ಹಲವೆಡೆ ಈಗಾಗಲೇ ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವವೇ ಮುಂದುವರೆದಿದೆ. ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ಚಿತ್ರದುರ್ಗ, ಮಂಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಕ್ಷದ ಯುವ ಮೋರ್ಚಾ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮರೆಯನ್ನು ಘೋಷಿಸಿದ್ದಾರೆ. ಇನ್ನು ಮುಂದುವರೆದು ಮತ್ತೆ ರಾಜೀನಾಮೆಗಳ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಪಕ್ಷ ತ್ಯಜಿಸುವುದಾಗಿ ಬಲವಾದ ನಿರ್ಧಾರ ತೆಗೆದುಕೊಂಡು ಸಾಮೂಹಿಕವಾಗಿ ರಾಜೀನಾಮೆ ಘೋಷಣೆ ಮಾಡಲು ಮುಂದಾಗಿದ್ದಾರೆ. ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಅಂದಮೇಲೆ ನಾವು ಪಕ್ಷದಲ್ಲಿ ಇದ್ದು ಏನು ಪ್ರಯೋಜನೆ ಎನ್ನುವ ಕೂಗುಗಳು ಜೋರಾಗಿಯೇ ಕೇಳಿಬರುತ್ತಿವೆ.

ಪ್ರವೀಣ್ ಹತ್ಯೆಗೆ ನ್ಯಾಯ ಒದಗಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಸರದಿಯಲ್ಲಿ ರಾಜೀನಾಮೆಗೆ ಮುಂದಾಗಿದ್ದಾರೆ..












Click it and Unblock the Notifications