Assembly election 2023: ಹನೂರೂ: ಕಾಂಗ್ರೆಸ್ ಬಸ್ ಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಕುಡುಕರು, ಜನರತ್ತ ಸೇಬುಗಳನ್ನ ಎಸೆದ DKS
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಪ್ರಜಾಧ್ವನಿ ಬಸ್ ಯಾತ್ರೆ ನಡೆದಿದ್ದು, ಈ ವೇಳೆ ಕುಡುಕರಿಬ್ಬರು ಕುಣಿದು ಕುಪ್ಪಳಿಸಿದ್ದಾರೆ.
ಚಾಮರಾಜನಗರ, ಫೆಬ್ರವರಿ, 21: ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆಯಲ್ಲಿ ಮದ್ಯಪಾನಿಗಳು ಕುಣಿದು ಕುಪ್ಪಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆಯಿತು.
ಕುಣಿದು ಕುಪ್ಪಳಿಸಿದ ಕುಡುಕರು
ಹನೂರು ಕ್ಷೇತ್ರದಲ್ಲಿ ಮಂಗಳವಾರ ಡಿ.ಕೆ. ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ಕಲಾವಿದರೊಬ್ಬರು ಹಾಡನ್ನು ಹಾಡುತ್ತಿರು. ಇದರಿಂದ ಉತ್ತೇಜನಗೊಂಡ 7-8 ಮಂದಿ ಕುಡುಕರು ವೇದಿಕೆ ಬಳಿಯೇ ಕುಣಿದು ಕುಪ್ಪಳಿಸಿದರು. ತಾವು ಇಷ್ಟಪಟ್ಟ ಹಾಡು ಹಾಡದಿದ್ದಕ್ಕೆ ಕಲಾವಿದನ ಮೇಲೆಯೇ ಗರಂ ಆದ ಘಟನೆಯೂ ಜರುಗಿತು.
ಹನೂರು ಪಟ್ಟಣಕ್ಕೆ ಬಸ್ ಯಾತ್ರೆ ಪ್ರವೇಶಿಸಿದ ವೇಳೆ ಜನರು ಡಿ.ಕೆ. ಶಿವಕುಮಾರ್ ಹಾಗೂ ಶಾಸಕ ನರೇಂದ್ರಗೆ ಬೃಹತ್ ಸೇಬಿನ ಹಾರ ಹಾಕಿದರು. ಈ ವೇಳೆ ಡಿ.ಕೆ. ಶಿವಕುಮಾರ್ ಹಾರದಲ್ಲಿನ ಸೇಬುಗಳನ್ನು ಕಿತ್ತು ಜನರಿಗೆ ಎಸೆದರು.

ಅಶ್ವತ್ಥ್ ನಾರಾಯಣ್ ವಿರುದ್ಧ ಕೇಸ್ ದಾಖಲಿಸಿ
ಹಾಗೆಯೇ ಸಚಿವ ಅಶ್ವತ್ಥ್ ನಾರಾಯಣ್ ಎಲ್ಲಿ ಕೊಲೆ ಪ್ರಚೋದನೆ ಹೇಳಿಕೆ ಕೊಟ್ಟಿದ್ದಾರೆಯೋ, ಅಲ್ಲೇ ಕೇಸ್ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹನೂರಿನಲ್ಲಿ ಒತ್ತಾಯಿಸಿದರು. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವತ್ಥ್ ನಾರಾಯಣ್ ಒಬ್ಬ ಮಂತ್ರಿಯಾಗಿ ಮಾಜಿ ಸಿಎಂ ಅನ್ನು ಕೊಲೆ ಮಾಡುವ ಪ್ರಚೋದನೆ ಕೊಟ್ಟಿದ್ದಾರೆ. ಕ್ಷಮಾಪಣೆ ಕೇಳುವುದೆಲ್ಲಾ ಬೇಡ. ಭಾರತದ ಕಾನೂನು ಏನಿದೆ ಅದನ್ನು ರಾಜ್ಯ ಸರ್ಕಾರ ಪ್ರಯೋಗ ಮಾಡಲಿ ಎಂದು ಒತ್ತಾಯಿಸಿದರು.
ಅಶ್ವತ್ಥ್ ನಾರಾಯಣ್ ವಿರುದ್ಧ ಡಿ.ಕೆ.ಶಿ ಗರಂ
ಅಶ್ಚತ್ಥ್ ನಾರಾಯಣ್ ಪ್ರಚೋಧನಾತ್ಮಕ ಹೇಳಿಕೆ ನೀಡಿದ್ದು, ಮುಂದೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆತ ಅರೆಸ್ಟ್ ಆಗದಿದ್ದರೇ ಪೊಲೀಸ್ ಅಧಿಕಾರಿಗಳು ಕೂಡ ಹೊಣೆಯಾಗುತ್ತಾರೆ. ಅವರು ರಿಟೈರ್ ಆದರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಟಿಪ್ಪುವನ್ನು ಯಾರೋ ಗೌಡ ಕೊಂದ ಅಂಥಾ ಹೇಳುತ್ತಿದ್ದಾರೆ. ಅವರು ಯಾವ ಇತಿಹಾಸ ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇನ್ನು ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಕ್ರಿಯಿಸಿ, ಕುಲಪತಿಯಾಗಲು 15-20 ಕೋಟಿ ಕೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಾರೆ. ಪಿಎಸ್ಐ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿತ್ತು. ಸರ್ಕಾರದ ಆಡಳಿತ ವೈಫಲ್ಯದಿಂದ ಈ ರೀತಿ ಆಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೂ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ಉದ್ಯಮಿಗಳು ರಾಜ್ಯವನ್ನು ತೊರೆಯುತ್ತಿದ್ದಾರೆ
ಬಿಜೆಪಿ ಸರ್ಕಾರದ ಆಡಳಿತದಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ. ಕೋಮು ಗಲಭೆ, ಸಂಘರ್ಷದಿಂದ ಯಾವ ಉದ್ಯಮಿಯೂ ರಾಜ್ಯ ಸರ್ಕಾರದಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡುತ್ತಿಲ್ಲ. ಇದೀಗ ದೊಡ್ಡ ಉದ್ಯಮಿಗಳು ಕೂಡ ತಮಿಳುನಾಡು, ಆಂಧ್ರ ಪ್ರದೇಶಗಳ ಕಡೆಗೆ ಹೋಗುತ್ತಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದಿಂದ ಹೀಗೆ ಆಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪ ಮಾಡಿದರು.












Click it and Unblock the Notifications