ಚಾಮರಾಜನಗರ: ಶಾಲೆಗಳಿಗೆ ಕಳಪೆ ಆಹಾರ ಪದಾರ್ಥಗಳ ಪೂರೈಕೆ; ಅಧಿಕಾರಿಗಳಿಗೆ ತರಾಟೆ
ಚಾಮರಾಜನಗರ, ನವೆಂಬರ್, 30: ಈಗಾಗಲೇ ಜಿಲ್ಲೆಯ ಹಲವೆಡೆ ವಿದ್ಯಾರ್ಥಿನಿಲಯಗಳಲ್ಲಿ ಕಳಪೆ ಗುಣಪಟ್ಟದ ಆಹಾರ ನೀಡಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆಗಳು ನಡೆದಿವೆ. ಇದೀಗ ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ಪೂರೈಸುವ ಆಹಾರ ಪದಾರ್ಥಗಳು ಕಳಪೆಯಾಗಿದ್ದು, ಆಹಾರ ಪದಾರ್ಥಗಳ ಸ್ಯಾಂಪಲ್ ತಂದ ಶಾಸಕರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ಚಾಮರಾಜನಗರ ಕೆಡಿಪಿ ಸಭೆಯಲ್ಲಿ ನಡೆಯಿತು.
ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದಿದ್ದು, ಈ ವೇಳೆ ಶಾಲೆಗಳಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆಹಾರ ಧಾನ್ಯಗಳ ಸ್ಯಾಂಪಲ್‌ಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು. ಸಚಿವರು ಹುಳು ಬಂದಿದ್ದ ಬೇಳೆ ಕಂಡು ಆಹಾರ ಇಲಾಖೆ ಡಿಡಿ ಯೋಗಾನಂದ ಸೇರಿ ಅಕ್ಷರ ದಾಸೋಹದ ಅಧಿಕಾರಿಗಳಿಗೆ ಬೆವರಿಳಿಸಿದರು.

ಇನ್ನು, ಅಕ್ಷರ ದಾಸೋಹ ಇಲಾಖೆ ತಂದಿದ್ದ ಬೇಳೆ ಹಾಗೂ ಶಾಸಕರು ತಂದಿದ್ದ ಬೇಳೆ ಎರಡೂ ಕೂಡ ಸ್ವಚ್ಛವಾಗಿರದೇ ಕಳಪೆಯಿಂದ ಕೂಡಿತ್ತು. ಕಳಪೆ ಆಹಾರ ಪೂರೈಕೆ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡಿದ್ದೀರಾ ಎಂದು ಸಚಿವರು ಕೇಳಿದ್ದಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಡಿ ಉತ್ತರಿಸಿದರು.
ಇನ್ನು, ಡಿಡಿ ಅವರ ಉತ್ತರದಿಂದ ಸಮಾಧಾನವಾಗದ ಸಚಿವರು, ಶಾಸಕರು ತೀವ್ರ ತರಾಟೆಗೆ ತೆಗೆದುಕೊಂದು ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೊಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಸೂಚನೆ ನೀಡಿದರು.
ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ: ಚಾಮರಾಜನಗರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರಾದ ಮಹಾದೇವಪ್ಪ, ವೆಂಕಟೇಶ್ ಎದುರೇ ಶಾಸಕರ ನಡುವೆ ಮಾತಿನ ಚಕಮಕಿ ಉಂಟಾಯಿತು. ಸಭೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕುರಿತು ಪ್ರಶ್ನೆ ಮತ್ತು ಯೋಜನೆ ಬಗ್ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ ಕೇಳುವಾಗ ಶಾಸಕ ಪುಟ್ಟರಂಗಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ಎಷ್ಟು ಮಾತನಾಡುತ್ತೀರಿ, ಬೇರೆ ಇಬ್ಬರು ಶಾಸಕರು ಸುಮ್ಮನೆ ಕೂತಿದ್ದಾರೆಂದು ಆಕ್ಷೇಪ ಹೊರಹಾಕಿದರು. ಈ ಮಾತು ಕೇಳಿ ಕೆರಳಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ತಾನು ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ, ಕತೆ ಹೇಳುತ್ತಿಲ್ಲ. ನೀವು ಮಾತನಾಡಿ ಕೆಡಿಪಿ ಸಭೆಯಲ್ಲಿ ಮಾತಾನಾಡುವುದೇ ತಪ್ಪು ಎಂದರೆ ಹೇಗೆ ಎಂದು ಕೃಷ್ಣಮೂರ್ತಿ ಪ್ರಶ್ನಿಸಿದರು.
ಇನ್ನು ಶಾಸಕರ ನಡುವಿನ ಕಿತ್ತಾಟಕ್ಕೆ ಸಭೆ ಕೆಲಕ್ಷಣ ಗಪ್ ಚುಪ್ ಆಯಿತು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ನಂತರ ಸಭೆ ಮುಂದುವರೆಯಿತು.












Click it and Unblock the Notifications