ಚಾಮರಾಜನಗರ: ಸ್ವಂತ ವೇತನದಲ್ಲಿಯೇ ತಂದೆ-ತಾಯಿ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಿದ ಕಾನ್ಸ್‌ಟೇಬಲ್
ಚಾಮರಾಜನಗರ, ನವೆಂಬರ್, 14: ಪೊಲೀಸ್ ಎಂದರೆ ಒಂದು ರೀತಿ ಭಯದ ವಾತಾವರಣ ಸಮಾಜದಲ್ಲಿದೆ. ಆದರೆ, ಇಲ್ಲೋರ್ವ ಪೊಲೀಸ್ ಸಮಾಜ ಸೇವೆಗೆ ಮುಂದಾಗಿ ವಿದ್ಯಾರ್ಥಿಗಳಿಗೆ ಬೆಳಕಾಗಲು ಹೊರಟಿದ್ದಾರೆ. ಅಷ್ಟಕ್ಕೂ ಈ ಅಧಿಕಾರಿ ಮಾಡಿದ್ದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಪೂರ್ವ ಠಾಣೆಯ ಕಾನ್ಸ್‌ಟೇಬಲ್ ನಾಗೇಂದ್ರ ಎಂಬವರು ಇಂದು ತಂದೆ-ತಾಯಿ ಹೆಸರಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ, ತಮ್ಮ ವೇತನದಲ್ಲಿ 10-15,000 ರೂಪಾಯಿ ಅನ್ನು ಬಡ ವಿದ್ಯಾರ್ಥಿಗಳು, ಅಶಕ್ತರಿಗೆ ಮೀಸಲಿಟ್ಟು ಸಮಾಜಮುಖಿಯಾಗಿದ್ದಾರೆ.

ಕೃಷಿಕ ಕುಟುಂಬದ ಹಿನ್ನೆಲೆ ಇರುವ ನಾಗೇಂದ್ರ ಅವರು, 2016-17ನೇ ಬ್ಯಾಚ್‌ನಲ್ಲಿ ಕಾನ್ಸ್‌ಟೇಬಲ್ ಆಗಿ ನೇಮಕಗೊಂಡಿದ್ದು, ಅಂದಿನಿಂದಲೂ ತಮ್ಮ ಕೈಲಾದಷ್ಟು ಸಹಾಯ ಹಸ್ತ ಚಾಚುತ್ತಿದ್ದರು. ಈಗ ಅದನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವುದು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ನೆರವಾಗುವುದು, ವೃದ್ಧರು, ಅಶಕ್ತರಿಗೆ ಸಹಾಯ ಮಾಡುವುದು, ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಡುವ ಕೆಲಸವನ್ನು ಟ್ರಸ್ಟ್ ಮಾಡಲಿದೆ. ಟ್ರಸ್ಟ್‌ನಲ್ಲಿ ತಂದೆ-ತಾಯಿ, ಸಹೋದರಿ, ಚಿಕ್ಕಪ್ಪ- ಚಿಕ್ಕಮ್ಮ ಇದ್ದು, ವೇತನದ ಉಳಿತಾಯವನ್ನು ನಾನು ಟ್ರಸ್ಟ್‌ಗೆ ಕೊಡಲಿದ್ದೇನೆ ಎನ್ನುತ್ತಾರೆ ನಾಗೇಂದ್ರ.
ಟ್ರಸ್ಟ್ ಉದ್ಘಾಟಿಸಿದ ಗುಂಡ್ಲುಪೇಟೆ ಶಾಸಕ: ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿದ್ದರೆ, ಪ್ರವೃತ್ತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಅಲ್ಲದೆ ಮತ್ತಷ್ಟು ಸಮಾಜ ಸೇವೆಗಾಗಿ ತಂದೆ, ತಾಯಿ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಮಾಡಿರುವ ಎಂ.ನಾಗೇಂದ್ರ ಸೇವಾ ಕಾರ್ಯವನ್ನು ಗುಂಡ್ಲುಪೇಟೆ ಶಾಸಕ ಹೆಚ್.ಎಸ್.ಗಣೇಶ್ ಪ್ರಸಾದ್ ಶ್ಲಾಘಿಸಿದರು.
ಚಾಮರಾಜನಗರ ತಾಲೂಕಿನ ಹರವೆ ಗ್ರಾಮದಲ್ಲಿ ಶ್ರೀಮತಿ ಮಹದೇವಮ್ಮ ಮತ್ತು ಶ್ರೀಮಹದೇವಯ್ಯ ಚಾರಿಟಬಲ್ ಟ್ರಸ್ಟ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಒಂದು ಟ್ರಸ್ಟ್ ನಡೆಸುವುದು ತುಂಬಾ ಕಷ್ಟಕರ ಕೆಲಸವಾಗಿದೆ. ಟ್ರಸ್ಟ್ ಮೂಲಕ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಎಂ.ನಾಗೇಂದ್ರ ಅವರು ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಜನಸೇವೆಗೆ ಅನುಕೂಲ ಮಾಡಿಕೊಡುವಂತಹ ಕೆಲಸ ಮಾಡಿದ್ದಾರೆ. ಈ ಟ್ರಸ್ಟ್ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು.
ಹೆಚ್ಚಾಯ್ತು ಸೇವ್ ಬಂಡೀಪುರ ಕೂಗು: ಬಂಡೀಪುರ-ವಯನಾಡು ನಡುವೆ ರಾತ್ರಿ ಸಂಚಾರ ನಿಷೇಧ ತೆರವಿಗೆ ಡಿ.ಕೆ.ಶಿವಕುಮಾರ್ ಭರವಸೆ ಕೊಟ್ಟು ಬಂದಿದ್ದಾರೆ. ಈ ನಿರ್ಧಾರ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಮತ್ತೇ ಸೇವ್ ಬಂಡೀಪುರ ಕೂಗು ಹೆಚ್ಚಾಗಿದೆ. ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿಯಾಗಿ ರಿಯಾಕ್ಷನ್ಸ್ ಬರುತ್ತಿವೆ ಎಂದು ಇಲ್ಲಿ ತಿಳಿಯಿರಿ.
ಟ್ವೀಟ್‌ನಲ್ಲಿ ಸೇವ್ ಬಂಡೀಪುರ ಹ್ಯಾಷ್ ಟ್ಯಾಗ್ ಬಳಸಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನು ಕೇರಳ ಲಾಬಿಗೆ ಕರ್ನಾಟಕ ಸರ್ಕಾರ ಮಣಿಯದೇ ವನ್ಯಸಂಪತ್ತನ್ನು ಕಾಪಾಡಬೇಕು. ಅಲ್ಲದೆ ಡಿ.ಕೆ.ಶಿವಕುಮಾರ್ ತೆಗೆದುಕೊಂಡಿರುವ ನಿಲುವಿಗೆ ಆಕ್ರೋಶ ಹೊರಹಾಕುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಹೇಳಿಕೆ ವಿರುದ್ಧ ಆಕ್ರೋಶ: ಬಂಡೀಪುರ ಭಾರತದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿದ್ದು, ವನ್ಯಜೀವಿಗಳ ರಕ್ಷಣೆಗಾಗಿ 2009ರಿಂದ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಬಂಡೀಪುರ-ವಯನಾಡು ಹಾಗೂ ಬಂಡೀಪುರ-ಊಟಿ ರಸ್ತೆ ಸಂಚಾರಕ್ಕೆ ನಿರ್ಬಂಧವಿದೆ. ಈ ಹಿಂದೆ ಸಾಕಷ್ಟು ಬಾರಿ ಕೇರಳ ಸರ್ಕಾರ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಲು ಪ್ರಯತ್ನಿಸಿತ್ತು. ಈಗ ಮತ್ತೇ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಹೇಳಿಕೆಗಳಿಂದ ಮತ್ತೇ ಮುನ್ನಲೆಗೆ ಬಂದಿದೆ.












Click it and Unblock the Notifications