ಮೂರನೇ ಹೆಂಡತಿಗೆ ಥಳಿಸಿ ನಾಲ್ಕನೇ ಮದುವೆಗೆ ರೆಡಿಯಾದ ಭೂಪ!
ಚಾಮರಾಜನಗರ, ಜನವರಿ 17: ಮೂರು ಮದುವೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಪ್ರೀತಿಸಿ ಮದುವೆಯಾಗಿದ್ದ ಮೂರನೇ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದು, ಆತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ತಾಲೂಕಿನ ಹೊಂಗನೂರು ಗ್ರಾಮದ ಸಿದ್ದರಾಜು ಎಂಬ ವ್ಯಕ್ತಿ ಎರಡೂವರೆ ವರ್ಷದ ಹಿಂದೆ ಮಮತಾ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದನು. ಇದಕ್ಕೂ ಮುನ್ನ ಸಿದ್ದರಾಜುವಿಗೆ ಇಬ್ಬರು ಹೆಂಡತಿಯರಿದ್ದರು. ಮಮತಾ ಮೂರನೇ ಪತ್ನಿಯಾಗಿದ್ದಳು. ಈಕೆಯನ್ನು ಬೆಂಗಳೂರಿಗೆ ಕರೆದೊಯ್ದು ಸಂಸಾರ ಮಾಡುತ್ತಿದ್ದನು.
ಕಳೆದ ವರ್ಷ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಸಮುದ್ರ ಬಳಿ ಮಮತಾಳ ಮೇಲೆ ಹಲ್ಲೆ ನಡೆಸಿ ಪ್ರಜ್ಞೆ ತಪ್ಪಿದ ಬಳಿಕ ಆಸ್ಪತ್ರೆಗೆ ಸೇರಿಸಿದ ಆತ ನಂತರ ಈಕೆ ಅಪರಿಚಿತಳು ಎಂದು ಹೇಳಿ ಪರಾರಿಯಾಗಿದ್ದನು. ತೀವ್ರ ಹಲ್ಲೆಗೊಳಗಾಗಿದ್ದ ಮಮತಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಚೇತರಿಸಿಕೊಂಡ ಬಳಿಕ ಪೊಲೀಸರ ಬಳಿ ತನ್ನ ಪತಿಯೇ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಳು.

ಸಿದ್ದರಾಜು ಮತ್ತೊಂದು ಮದುವೆಗೆ ಯತ್ನಿಸಿದ್ದನ್ನು ಕಂಡ ಮಮತಾಳ ಕುಟುಂಬದವರು ತರಾಟೆಗೆ ತೆಗೆದುಕೊಂಡ ಬಳಿಕ ಘಟನೆಯ ಸತ್ಯಾಂಶ ಹೊರಬಂದಿದೆ. ಈ ಎಲ್ಲ ಅಂಶಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡು ಬೆಂಗಳೂರಿನ ಚೋಳನಾಯಕನ ಹಳ್ಳಿ ಬಳಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications