ಹನೂರು: ಪಿಂಚಣಿ ಕೊಡಿಸುವುದಾಗಿ ವಂಚಿಸಿದ ದಂಪತಿ: ಕಣ್ಣೀರಲ್ಲಿ ಕೈತೊಳೆಯುತ್ತಿರುವ ನೂರಾರು ಮಂದಿ ವೃದ್ಧರು
ಚಾಮರಾಜನಗರ, ಸೆಪ್ಟೆಂಬರ್, 20: ಪಿಂಚಣಿ ಕೊಡಿಸುವುದಾಗಿ ನೂರಾರು ಮಂದಿ ವೃದ್ಧರಿಗೆ ದಂಪತಿ ವಂಚಿಸಿರುವ ಆರೋಪ ಚಾಮರಾಜನಗರ ಜಿಲ್ಲೆಯ ಹನೂರಲ್ಲಿ ಕೇಳಿಬಂದಿದೆ. ಹಾಗಾದರೆ ಈ ವಂಚನೆ ಪ್ರಕರಣ ನಡೆದಿದ್ದು ಯಾವಾಗ ಹಾಗೂ ಈ ಬಗ್ಗೆ ವಂಚನೆಗೊಳಗಾದವರು ಹೇಳುವುದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2022ರ ಕೊರೊನಾ ಸಮಯದಲ್ಲಿ ಹನೂರು ತಾಲೂಕಿನ ಗುಂಡಾಪುರ, ಗಂಗನದೊಡ್ಡಿ ಬಸಪ್ಪನದೊಡ್ಡಿ, ಮಂಚಾಪುರ ಸೇರಿದಂತೆ ಹಲವು ಗ್ರಾಮಗಳ ನೂರಾರು ಮಂದಿ ಹಿರಿಯ ನಾಗರಿಕರು, ವಿಧವೆಯರು, ವಿಶೇಷ ಚೇತನರಿಗೆ ಸರ್ಕಾರಿ ಯೋಜನೆಯ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಹಣ ಪಡೆದು, ನಕಲಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ರೈತ ಮುಖಂಡ ಅಮ್ಜದ್ ಖಾನ್ ನೇತೃತ್ವದಲ್ಲಿ ವೃದ್ಧರು ಹನೂರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

2022ರ ಕೊರೊನಾ ಸಂದರ್ಭದಲ್ಲಿ ಶಾರದಾ ಮತ್ತು ಪುಟ್ಟೇಗೌಡ ಎಂಬ ದಂಪತಿ ಅಂಬಿಕಾಪುರದ ತೋಟದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಆ ವೇಳೆ ವಿವಿಧ ಗ್ರಾಮಗಳ ವೃದ್ಧರು, ಮಹಿಳೆಯರಿಗೆ ಪಿಂಚಣಿ ಕೊಡಿಸುವುದಾಗಿ ಸಾವಿರಾರು ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಬಳಿಕ, 2023ರಲ್ಲಿ ಆದೇಶ ಪತ್ರಗಳನ್ನು ವಿತರಣೆ ಮಾಡಿದ್ದು, ಇಷ್ಟು ದಿನಗಳಾದರೂ ಪಿಂಚಣಿ ಹಣ ಬರುತ್ತಿಲ್ಲವೆಂದು ಈಗ ವಿಚಾರಿಸಿದಾಗ ಅವುಗಳು ನಕಲಿ ಆದೇಶ ಪತ್ರಗಳು ಎನ್ನುವ ಸತ್ಯ ಬಯಲಾಗಿದೆ.
ಹನೂರು ತಹಶೀಲ್ದಾರ್ ಗುರುಪ್ರಸಾದ್‌ಗೆ ವಿವಿಧ ಗ್ರಾಮದ ವಯೋವೃದ್ಧರು, ತಮ್ಮ ಅಳಲು ತೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿದ್ದಾರೆ. ವಂಚನೆಗೊಳಗಾದ ವೃದ್ಧರು, ವಿಧವೆಯರಿಗೆ ಸರ್ಕಾರಿ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ, ಬಳಿಕ ಪರಿಶೀಲಿಸಿ ಪಿಂಚಣಿ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದಾರೆ.
ಏನು ತಿಳಿಯದ ಮುಗ್ಧ ಜನತೆಗೆ ದಂಪತಿ ವಂಚಿಸಿ ನೂರಾರು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಬೆಂಗಳೂರು ವಿಳಾಸ ಇರುವ ನಕಲಿ ಆದೇಶ ಪ್ರತಿಗಳನ್ನು ನೀಡುವ ಮೂಲಕ ವಂಚನೆ ಮಾಡಿದ್ದಾರೆ. ಇಬ್ಬರ ಮೇಲೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಅಮ್ಜದ್ ಖಾನ್ ಒತ್ತಾಯಿಸಿದ್ದಾರೆ.
ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ: ಮನೆ ನಿರ್ಮಾಣಕ್ಕಾಗಿ ಸೋಲಿಗ ಜನಾಂಗದಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರಣ್ಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಪಾಲಾರ್ ಗ್ರಾಮದಲ್ಲಿ ನಡೆದಿದೆ. ಹಾಗಾದರೆ ಘಟನೆ ನಡೆದಿದ್ದು ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹನೂರು ತಾಲೂಕಿನ ಪಾಲಾರ್ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲು ಸೋಲಿಗ ಜನಾಂಗದ ನಿವಾಸಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಾಲರ್ ವಲಯ ವ್ಯಾಪ್ತಿಯ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಾರ್ ಗ್ರಾಮದಲ್ಲಿ ಆದಿವಾಸಿ ಕುಟುಂಬಗಳಿಗೆ 18 ಮನೆ ಮಂಜೂರಾಗಿದ್ದವು. ಎಲ್ಲಾ ಮನೆಯವರು ಅಡಿಪಾಯ ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರದಿಂದ ಮೊದಲ ಕಂತು ಬಿಡುಗಡೆ ಆಗಿದೆ.
ಈ ವೇಳೆ ಮನೆ ನಿರ್ಮಾಣ ಮಾಡುತ್ತಿರುವ ಆದಿವಾಸಿಗಳನ್ನು ನೀವು ಮನೆಯ ಗೋಡೆ ಕಟ್ಟಬೇಡಿ ಎಂದು ಭೋಜಪ್ಪ ಕಿರುಕುಳ ನೀಡಿ ಸುಮಾರು ಒಂದು ತಿಂಗಳುಗಳ ಕಾಲ ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಬಳಿಕ ನಿವಾಸಿಗಳೆಲ್ಲರೂ ಮನೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಾಗ ಪ್ರತಿ ಮನೆಯವರು ಒಂದೊಂದು ಸಾವಿರದಂತೆ 18,000 ರೂಪಾಯಿ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಸಂಬಂಧ ಪಾಲಾರ್ ಗ್ರಾಮದ ಫಲಾನುಭವಿ ಮುರುಗೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಉಪ ವಲಯ ಅರಣ್ಯ ಅಧಿಕಾರಿ ಭೋಜಪ್ಪ ರವರನ್ನು 18,000 ರೂಪಾಯಿ ಹಣದ ಸಮೇತ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications