ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತರ ಅಳಲು: ಕೊನೆಗೂ ಸಿಕ್ಕ ಭರವಸೆಯೇನು?
ಚಾಮರಾಜನಗರ, ಮೇ, 02: ಕೊರೊನಾ ಸಮಯದಲ್ಲಿ ನಡೆದ ಆಕ್ಸಿಜನ್ ದುರಂತ ಚಾಮರಾಜನಗರ ಮಾತ್ರವಲ್ಲದೇ, ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ದುರಂತ ನಡೆದು ನಾಲ್ಕು ವರ್ಷವಾದರೂ ಸಂತ್ರಸ್ತರಿಗೆ ಮಾತ್ರ ಯಾವುದೇ ರೀತಿಯ ನ್ಯಾಯ ಸಿಕ್ಕಿಲ್ಲ. ಅಂದಿನ ಬಿಜೆಪಿ ಸರ್ಕಾರ ಯಾವುದೇ ರೀತಿಯ ನ್ಯಾಯ ನೀಡಿಲ್ಲವೆಂದು ಆರೋಪಿಸಿದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದ ಬಳಿಕವೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ ಈಗ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯಲ್ಲಿಯೂ ಆಕ್ಸಿಜನ್ ದುರಂತದ ಸಂತ್ರಸ್ತರ ಸರ್ಕಾರಿ ಉದ್ಯೋಗದ ವಿಚಾರವನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ನಿರ್ಧಾರ ಮಾಡುವ ಭರವಸೆ ಸಿಕ್ಕಿದೆ. ಆದರೆ ಇದು ಭರವಸೆ ಮಾತ್ರನಾ ಎಂದು ಸಂತ್ರಸ್ತರು ಕೇಳುತ್ತಿದ್ದಾರೆ. ಏಕೆಂದರೆ ಈ ಹಿಂದೆ ಕಾಂಗ್ರೆಸ್ ನಾಯಕರು ಸಂತ್ರಸ್ತರ ಕುಟುಂಬಕ್ಕೆ 1ಲಕ್ಷ ಪರಿಹಾರ ನೀಡಿ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದರು. ಆದರೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನೀಡಿದ್ದ ಭರವಸೆಯನ್ನು ಮರೆತು ಬಿಟ್ಟಿತು.

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಕಣ್ಣೀರಲ್ಲೇ ಕೈ ತೊಳೆಯುತ್ತಿವೆ. ಈ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಂತ್ರಸ್ತ ಮಹಿಳೆ ನಾಗರತ್ನ ಮಾತನಾಡಿ, 'ಸಿಮ್ಸ್ ನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ತಿಳಿಸಲಾಗಿತ್ತು. ನನ್ನ ಪತಿ ಮೃತಪಟ್ಟ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಹಿಂಸೆಯಾಗುತ್ತದೆ. ನಮ್ಮ ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಡಿ ಗ್ರೂಪ್ ಕೆಲಸ ಕೊಟ್ಟರೂ ಸಿಮ್ಸ್‌ಗೆ ಹಾಕಬೇಡಿ. ನಮ್ಮವರನ್ನು ಕಳೆದುಕೊಂಡು 4 ವರ್ಷಗಳಾಗುತ್ತಿದೆ. ನಮಗೆ ಜೀವನ ಮಾಡಲು ತೊಂದರೆಯಾಗುತ್ತಿದೆ' ಎಂದು ನೋವು ತೋಡಿಕೊಂಡಿದ್ದರು.
ಇನ್ನು ಕೆಲವು ಸಂತ್ರಸ್ತರು ನಮಗೆ ನೀಡಿದ ಪರಿಹಾರವನ್ನು ವಾಪಸ್ ನೀಡುತ್ತೇವೆ. ಹಾಗೆಯೇ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದರು. ಇದೆಲ್ಲ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗ ಶೆಟ್ಟಿ ಮತ್ತು ಸಂಸದ ಸುನೀಲ್ ಬೋಸ್ ಅವರು ಸಭೆ ನಡೆಸಿ ಅಕ್ಸಿಜನ್ ದುರಂತದ ಸಂತ್ರಸ್ತರ ಕುಟುಂಬಗಳಿಗೆ ಉದ್ಯೋಗ ಹಾಗೂ ಪರಿಹಾರದ ಭರವಸೆ ನೀಡಿದ್ದಾರೆ
ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಜನರಿಗೆ ಸರ್ಕಾರಿ ಉದ್ಯೋಗ ಕೊಡಲಾಗುವುದು. ಶೈಕ್ಷಣಿಕ ಅರ್ಹತೆ ಇಲ್ಲದವರಿಗೆ ಒಂದೇ ಹಂತದಲ್ಲಿ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆದಿದೆ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವುದರಿಂದ ಮೃತರ ಮನೆಯವರು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆರ್ಥಿಕ ಸಮಸ್ಯೆಯಾಗುತ್ತದೆ. ಜಿಲ್ಲಾಡಳಿತ ಸದಾ ನಿಮ್ಮೊಂದಿಗೆ ಇರಲಿದೆ. ಕಚೇರಿಯಲ್ಲಿ ನಿಮ್ಮ ಸಂಪರ್ಕಕ್ಕೆ ನಾನು ಲಭ್ಯವಿರುತ್ತೇನೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ಸಂಸದ ಸುನೀಲ್ ಬೋಸ್ ಮಾತನಾಡಿ, 'ಇದು ಭರವಸೆ ಕೊಡುವ ಸಭೆಯಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಜನರಿಗೆ ಕೊಟ್ಟಿದ್ದ ಮಾತು. ಪ್ರಣಾಳಿಕೆಯಲ್ಲೂ ಇದನ್ನು ಸೇರಿಸಿದ್ದೆವು. ಸರ್ಕಾರ ಬಂದು 2 ವರ್ಷಗಳಾಗುತ್ತಿದೆ. ಆದರೂ ಇನ್ನೂ ಸರ್ಕಾರಿ ಉದ್ಯೋಗ ಸಿಗಲಿಲ್ಲವಲ್ಲ ಅನ್ನೋ ಆತಂಕ ಸಂತ್ರಸ್ತರಲ್ಲಿದೆ. ಕುಟುಂಬಸ್ಥರನ್ನು ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿರುವವರಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಉದ್ಯೋಗ ಸಿಗುವ ಭರವಸೆಯನ್ನು ಇಟ್ಟುಕೊಂಡಿದ್ದರು. ಈಡೇರದೆ ಇದ್ದಾಗ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಕರೆದು ಸಭೆ ನಡೆಸಿದ್ದೇವೆ' ಎಂದು ತಿಳಿಸಿದ್ದಾರೆ.
ಸಂತ್ರಸ್ತರಾದ ಮಂಜುನಾಥ್ ಮಾತನಾಡಿ, 'ಇದೊಂದು ಭಾವನಾತ್ಮಕ ವಿಚಾರ. ನಮಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಉದ್ಯೋಗ ಬೇಡ. ಕಾಯಂ ಉದ್ಯೋಗವನ್ನೇ ನೀಡಿ' ಎಂದು ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಈಗಾಗಲೇ ದುರಂತ ನಡೆದು ನಾಲ್ಕು ವರ್ಷಗಳಾಗಿವೆ. ಇನ್ನೆಷ್ಟು ವರ್ಷ ಕಾಯಬೇಕು ಎನ್ನುವುದು ಸಂತ್ರಸ್ತರ ಆಳಲಾಗಿದೆ.












Click it and Unblock the Notifications