ಗುಂಡ್ಲುಪೇಟೆಯಲ್ಲಿ ಮನೆ ನಿರ್ಮಾಣಕ್ಕೂ ಸಿಗುತ್ತಿಲ್ಲ ಲೈಸನ್ಸ್!

Posted By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 4: ಗುಂಡ್ಲುಪೇಟೆಯಲ್ಲಿರುವ ಕೆಲವು ಬಡಾವಣೆಗಳನ್ನು ಅಭಿವೃದ್ಧಿಗೊಳಿಸುವ ವೇಳೆ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಪುರಸಭೆ ಮನೆಕಟ್ಟಲು ಲೈಸನ್ಸ್ ನೀಡಲು ಹಿಂದೇಟು ಹಾಕುತ್ತಿದೆ. ಈ ಕಾರಣದಿಂದಾಗಿ ಮನೆ ಕಟ್ಟುವ ಬಯಕೆ ಹೊಂದಿದ್ದ ಹಲವರ ಕನಸು ಭಗ್ನವಾಗಿದೆ.

ಗುಂಡ್ಲುಪೇಟೆಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದಲೂ ಅಸ್ತಿತ್ವದಲ್ಲಿರುವ ಅಶ್ವಿನಿ ಬಡಾವಣೆ, ಕೆ.ಎಸ್.ನಾಗರತ್ನಮ್ಮ ಬಡಾವಣೆ, ದ.ರಾ.ಬೇಂದ್ರೆ ನಗರ, ಜಾಕೀರ್ ಹುಸೇನ್ ನಗರ ಹಾಗೂ ಬಸವೇಶ್ವರ ನಗರಗಳಲ್ಲಿ ಮನೆಕಟ್ಟಲು ಪುರಸಭೆಯು ಪರವಾನಗಿ ನೀಡುತ್ತಿಲ್ಲ. ಇದರಿಂದಾಗಿ ಇಲ್ಲಿ ಕಷ್ಟಪಟ್ಟು ನಿವೇಶನದ ಜಾಗ ಖರೀದಿಸಿದವರು ಈಗ ಪರದಾಡುವಂತಾಗಿದೆ.

ನಗರಾಭಿವೃದ್ಧಿ ಇಲಾಖೆಯಿಂದ ಮೇ.4ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರನ್ವಯ ಈ ಪರವಾನಗಿ ನೀಡುತ್ತಿಲ್ಲ.

 ನಿಯಮ ಉಲ್ಲಂಘನೆ

ನಿಯಮ ಉಲ್ಲಂಘನೆ

ಭೂಪರಿವರ್ತನೆಯಾದ ಜಮೀನುಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರಗಳಿಂದ ವಿನ್ಯಾಸ ಹಾಗೂ ನಕ್ಷೆಗಳಿಗೆ ಅನುಮೋದನೆ ಪಡೆಯದೆಯೇ ಅನಧಿಕೃತವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ವೆಚ್ಚವಾಗುವುದರಿಂದ ಇವುಗಳಿಗೆ ಅನುಮೋದನೆ ನೀಡುತ್ತಿಲ್ಲ. 1976ಕ್ಕೂ ಮೊದಲೇ ಅನುಮೋದನೆ ಪಡೆದ ಬಡಾವಣೆಗಳಿಗೆ ಮಾತ್ರ ಕಂದಾಯ ಇಲಾಖೆಯಿಂದ ಅನುಮತಿ ಪಡೆದು ಪರವಾನಗಿ ನೀಡಲಾಗುತ್ತದೆ.

 ಖಾಸಗಿ ಬಡಾವಣೆಗಳಲ್ಲಿ ನಿವೇಶನ ಪಡೆದವರಿಗೆ ತಲೆನೋವು

ಖಾಸಗಿ ಬಡಾವಣೆಗಳಲ್ಲಿ ನಿವೇಶನ ಪಡೆದವರಿಗೆ ತಲೆನೋವು

ಈ ಸುತ್ತೋಲೆ ಪ್ರಕಾರ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಪಡೆದ ಹಲವರಿಗೆ ತಲೆನೋವಾಗಿ ಪರಿಣಮಿಸಿದೆ. ಈಗಿರುವ ಬಹುತೇಕ ಬಡಾವಣೆಗಳನ್ನು ಖಾಸಗಿ ವ್ಯಕ್ತಿಗಳೇ ಅಭಿವೃದ್ದಿಪಡಿಸಿ ಪುರಸಭೆಯಿಂದ ಅನುಮೋದನೆ ಪಡೆದು ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಅಲ್ಲದೆ ನಿವೇಶನ ಖರೀದಿಸಿದವರು ಪುರಸಭೆಯಲ್ಲಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡು ಕಂದಾಯ ಪಾವತಿ ಮಾಡುತ್ತಿದ್ದಾರೆ.

ಸ್ವಂತ ಮನೆಕಟ್ಟಲು ಬ್ಯಾಂಕ್ ನೆರವು ಪಡೆಯಲು ಪುರಸಭೆಯ ಪರವಾನಗಿ, ಬಡಾವಣೆಯ ನಕ್ಷೆ ಹಾಗೂ ನಗರ ಯೋಜನಾ ಇಲಾಖೆಯ ಅನುಮತಿ ಅಗತ್ಯವಿದ್ದು, ಇಂಥ ಸುಮಾರು 30 ಅರ್ಜಿಗಳನ್ನು ಹಿಂಬರಹ ನೀಡಿ ತಿರಸ್ಕರಿಸಿರುವುದು ಕಂಡು ಬಂದಿದೆ.

 ಸಾಲ ನೀಡುತ್ತಿಲ್ಲ ಬ್ಯಾಂಕ್

ಸಾಲ ನೀಡುತ್ತಿಲ್ಲ ಬ್ಯಾಂಕ್

ಸದ್ಯ ಪುರಸಭೆ ಲೈಸನ್ಸ್ ನೀಡದ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ನಿವೇಶನ ಹೊಂದಿರುವ ಮಾಲೀಕರು ಇದೀಗ ಮನೆ ಕಟ್ಟಲು ಸಾಲ ಸೌಲಭ್ಯ ಸಿಗದೆ ತೊಂದರೆ ಅನುಭವಿಸುವಂತಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪುರಸಭೆ ಮುಖ್ಯಾಧಿಕಾರಿ ರಮೇಶ್ ಅವರು ನಿವೇಶನದಲ್ಲಿ ಮನೆಕಟ್ಟಲು ಪರವಾನಗಿ ಕೇಳಿ ಬಂದಿದ್ದ ಸುಮಾರು 30 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಪುರಸಭೆಯು ಇದಕ್ಕೆ ಪರಿಹಾರ ಕಂಡುಕೊಳ್ಳಲು ವಿಶೇಷ ಸಭೆ ನಡೆಸಲಿದೆ. ಈ ಎಲ್ಲ ಬಡಾವಣೆಗಳಲ್ಲಿ ನಿವೇಶನ ಹೊಂದಿರುವವರು ಮನೆಕಟ್ಟಲು ಮುಂದಾದರೆ ಪುರಸಭೆಯು ತಡೆಯುಂಟು ಮಾಡದೆ ಅಕ್ರಮ ಸಕ್ರಮ ಯೋಜನೆಯಲ್ಲಿ ನೀರಿನ ಸಂಪರ್ಕ ನೀಡಲಿದೆ ಎಂದು ಹೇಳಿದ್ದಾರೆ.

 ಮನೆ ಕನಸು ಕಂಡವರಿಗೆ ನಿರಾಸೆ

ಮನೆ ಕನಸು ಕಂಡವರಿಗೆ ನಿರಾಸೆ

ಇನ್ನೊಂದೆಡೆ ನಿವೇಶನ ಹೊಂದಿರುವ ನಿವಾಸಿ ರೇವಣ್ಣ ಅವರು ಮಾತನಾಡಿ ಕಳೆದ ಐದು ವರ್ಷಗಳಿಂದ ಖಾಲಿ ನಿವೇಶನಕ್ಕೆ ಕಂದಾಯ ಪಾವತಿ ಮಾಡಿದ್ದೇನೆ. ಬ್ಯಾಂಕಿನಿಂದ ಸಾಲ ಪಡೆದು ಮನೆಕಟ್ಟಲು ಕಳೆದ ನಾಲ್ಕು ತಿಂಗಳ ಹಿಂದೆಯೇ ಪುರಸಭೆಗೆ ಅರ್ಜಿಸಲ್ಲಿಸಿದ್ದರೂ ಇದನ್ನು ತಿರಸ್ಕರಿಸಿದ್ದಾರೆ. ಹಿಂದೆ ಎಲ್ಲಾ ನಿಯಮಗಳನ್ನೂ ಮೀರಿ ಬಡಾವಣೆ ನಿರ್ಮಾಣ ಮಾಡಿದರೂ ಅದನ್ನು ಅನುಮೋದಿಸಿದ ಪುರಸಭೆಯು ಇತ್ತೀಚೆಗೆ ನಗರ ಯೋಜನಾ ಇಲಾಖೆಯ ಅನುಮತಿ ನೀಡುತ್ತಿಲ್ಲ ಎಂಬ ಕಾರಣದಿಂದ ಮಧ್ಯಮವರ್ಗದವರ ಕನಸನ್ನು ಭಗ್ನಗೊಳಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Gundlupet City Municipal Council has refused to grant licenses to building the house because the rules have not been maintained while developing some of the areas in Gundlupet. Due to this, the dream of many people who have a desire to build a house is baffled.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ