ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಮೂಲಸೌಕರ್ಯಗಳಿಲ್ಲ, ಸೌಲಭ್ಯ ಕೊಡದಿದ್ರೆ ಮತ ಕೇಳ್ಬೇಡಿ: ಇಂಡಿಗನತ್ತ ಗ್ರಾಮಸ್ಥರ ಆಕ್ರೋಶ
ಚಾಮರಾಜನಗರ, ಮಾರ್ಚ್, 14: ಮೂಲಸೌಕರ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಇಂಡಿಗನತ್ತ ಗ್ರಾಮಸ್ಥರು ಇಂದು (ಮಾರ್ಚ್ 14) ಸಭೆ ಸೇರಿ ಮೂಲಭೂತ ಸೌಲಭ್ಯ ನೀಡಿ. ಇಲ್ಲದಿದ್ದರೇ ಮತ ಕೇಳಲು ಬರಬೇಡಿ, ನಾವು ವೋಟು ಹಾಕುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಮುಖಂಡ ಪುಟ್ಟ ತಂಬಡಿ ಎಂಬವರು ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ನಾಗಮಲೆ, ಇಂಡಿಗನತ್ತ, ತೋಕೆರೆ, ಪಡಸಲನತ್ತ ಮೆಂದಾರೆ, ತೇಕಾಣೆ ಗ್ರಾಮಗಳಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲಂದತಾಗಿದೆ.

ರಸ್ತೆ ಇಲ್ಲಾ, ವಿದ್ಯುತ್ ಇಲ್ಲಾ, ಕುಡಿಯುವ ನೀರಿನ ಸೌಲಭ್ಯವಿಲ್ಲ. ಖಾಸಗಿ ಜೀಪ್‌ಗಳಲ್ಲಿ ಬರುತ್ತಿದ್ದೆವು. ಈಗ ಅದಕ್ಕೂ ಅರಣ್ಯ ಇಲಾಖೆ ನಿರ್ಬಂಧ ಹೇರಿದ್ದು, ಜೀವನ ನಡೆಸುವುದೇ ದುಸ್ತರವಾಗಿದೆ. ಹಿಂದೆ ಅಧಿಕಾರಿಗಳು, ಸಚಿವರು ನೀಡಿದ್ದ ಭರವಸೆ ಭರವಸೆಯಾಗೇ ಉಳಿದಿದೆ ಎಂದು ಕಿಡಿಕಾರಿದರು.
ಮೂಲಸೌಕರ್ಯವೇ ಮರೀಚಿಕೆಯಾಗಿರುವ ಗ್ರಾಮಕ್ಕೆ ಸರ್ಕಾರ ನೀಡಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿಗಳನ್ನು ವಾಪಸ್ ಪಡೆದು ನಮಗೆ ಸಾಯಲು ವಿಷ ನೀಡಿ. ಇಲ್ಲದಿದ್ದರೆ ಮೂಲಭೂತ ಸೌಲಭ್ಯ ಕೊಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 5000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾದಪ್ಪನ ಬೆಟ್ಟದ ತಪ್ಪಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications