ಚಾಮರಾಜನಗರ: ಇದು ಕಪ್ಪಕ್ಕಿ ಬೆಳೆದು ಯಶಸ್ಸು ಕಂಡ ರೈತ ನಂಜುಂಡಸ್ವಾಮಿಯ ಯಶೋಗಾಥೆ
ಚಾಮರಾಜನಗರ, ಜನವರಿ 17: ಭತ್ತದಲ್ಲಿ ನೂರಾರು ತಳಿಗಳಿದ್ದು, ಕೆಲವೊಂದು ತಳಿಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿವೆ. ಇದನ್ನು ಗಮನಿಸಿ ಕೆಲವರು ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಶೇಷ ತಳಿಯ ಭತ್ತವನ್ನು ಬೆಳೆದು ಎಲ್ಲರ ಪ್ರಶಂಸೆಗೂ ಪಾತ್ರರಾಗುತ್ತಿದ್ದಾರೆ. ಇಂತಹವರ ಪೈಕಿ ಇದೀಗ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದ ರೈತ ನಂಜುಂಡಸ್ವಾಮಿ ಕಪ್ಪಕ್ಕಿ(ಕಲಾಭತಿ) ಭತ್ತ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಬದಲಾದ ಕಾಲಘಟ್ಟದಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳಿಗಿಂತ ಹೊರಗಿನಿಂದ ನೋಡಲು ಸುಂದರವಾಗಿರುವುದನ್ನೇ ಜನರು ಇಷ್ಟಪಡುತ್ತಿದ್ದಾರೆ. ಇದರಲ್ಲಿ ಅಕ್ಕಿಯೂ ಸೇರುತ್ತದೆ. ಹಲವು ಬಗೆಯ ಅಕ್ಕಿಗಳಿದ್ದರೂ ಚಿಕ್ಕ ಮತ್ತು ಬೆಳ್ಳಗೆ ಇರುವ ಪಾಲೀಸ್ ಮಾಡಿದ ಸುಂದರ ಅಕ್ಕಿಯನ್ನು ಜನ ಇಷ್ಟಪಡುತ್ತಾರೆ. ಆದರೆ ಇವುಗಳಿಗಿಂತ ಯಾವುದೇ ಪಾಲೀಸ್ ಇಲ್ಲದ ಕೆಂಪು ಮತ್ತು ಕಪ್ಪು ಅಕ್ಕಿಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಜನ ಮರೆಯುತ್ತಿದ್ದಾರೆ.

ಸದ್ಯ ಕುಂತೂರು ಗ್ರಾಮದ ರೈತ ನಂಜುಂಡಸ್ವಾಮಿ ಅವರು ನಶಿಸಿ ಹೋಗುತ್ತಿರುವ ದೇಸಿ ಭತ್ತದ ತಳಿಗೆ ಜೀವ ತುಂಬುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಒಡಿಸ್ಸಾ ಮೂಲದ 'ಕಲಾಭತಿ' ತಳಿಯ ಕಪ್ಪಕ್ಕಿ ಬೆಳೆಯುವ ಮೂಲಕ ಎಲ್ಲರ ಗಮನ ತಮ್ಮತ್ತ ಬರುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಪೈರಿನಿಂದ ಆರಂಭವಾಗಿ ಬೆಳೆಯ ತನಕವೂ ಭತ್ತದ ಬೆಳೆ ಹಸಿರು ಬಣ್ಣದಲ್ಲಿರುತ್ತದೆ. ತೆನೆಯೊಡೆದು ಭತ್ತ ಬೆಳೆಯುತ್ತಿದ್ದಂತೆಯೇ ಹೊಂಬಣ್ಣಕ್ಕೆ ತಿರುಗುತ್ತದೆ. ಈ ವೇಳೆ ಕೊಯ್ಲು ಮಾಡಲಾಗುತ್ತದೆ. ಆದರೆ ಕಲಾಭತಿ ಭತ್ತ ಹಾಗಿಲ್ಲ. ಇದರ ಭತ್ತ, ಹುಲ್ಲು ಎಲ್ಲವೂ ಕಪ್ಪಾಗಿಯೇ ಇರುವುದು ಗಮನಾರ್ಹ.
1ಕೆಜಿ ಭತ್ತದಿಂದ 110 ಕೆಜಿ ಇಳುವರಿ
ಪ್ರಗತಿಪರ ರೈತರಾಗಿರುವ ನಂಜುಂಡಸ್ವಾಮಿಯವರು ಕೃಷಿಯಲ್ಲಿ ಏನಾದರೊಂದು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಅದರಂತೆ ಈ ಬಾರಿ ಕಲಾಭತಿ ಭತ್ತವನ್ನು ಬೆಳೆಯುವ ಉತ್ಸಾಹ ತೋರಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ಕಲಾಭತಿ ಭತ್ತ ಒಡಿಸ್ಸಾದು ಎನ್ನಲಾಗಿದೆ. ಇದನ್ನು ಬನ್ನೂರಿನಲ್ಲಿ ನೋಡಿದ ಅವರು ಅಲ್ಲಿಂದ ಒಂದು ಕೆಜಿಯಷ್ಟು ಬಿತ್ತನೆ ಬೀಜವನ್ನು ತಂದಿದ್ದರು. ನಂತರ ಅದನ್ನು ಇತರೆ ಭತ್ತದ ಬೆಳೆ ನಡುವೆ ಬೆಳೆದಿದ್ದರು. ಕೊಯ್ಲು ಮಾಡಿದ ಬಳಿಕ ಒಂದು ಕೆಜಿ ಭತ್ತದಿಂದ 110 ಕೆಜಿಯಷ್ಟು ಇಳುವರಿಯನ್ನು ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಕಲಾಭತಿ ಭತ್ತದ ಬೀಜವನ್ನು ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದ್ದು ಮತ್ತೆ ಇದರ ಕೃಷಿಯನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಮುಂದೆ ಹತ್ತು ಎಕರೆ ಪ್ರದೇಶದಲ್ಲಿ ಬೆಳೆಯುವ ತೀರ್ಮಾನ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಇದು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಬೇಡಿಕೆಯೂ ಇದೆಯಂತೆ. ರೈತ ನಂಜುಂಡಸ್ವಾಮಿ ಅವರು ತಮ್ಮ ಗದ್ದೆಯಲ್ಲಿ ರತ್ನಚೂಡಿ, ರಾಜ ಮುಡಿ, ಗಂಧಸಾಲ, ಜೀರಿಗೆ ಸಣ್ಣ ಸೇರಿದಂತೆ ಹಲವು ತಳಿಯ ಭತ್ತವನ್ನು ಬೆಳೆದಿದ್ದಾರೆ. ಇವುಗಳನ್ನು ಮಂಡ್ಯದ ಸಾವಯವ ರೈತರಿಂದ ಬಿತ್ತನೆಗೆ ತಂದಿದ್ದು ಅವುಗಳನ್ನು ಉಳಿಸಿಕೊಂಡು ಸಾವಯವ ವಿಧಾನದಲ್ಲಿ ಬೆಳೆಯುತ್ತಾ ಬಂದಿದ್ದಾರೆ.
ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸಿಕೊಂಡ ರೈತ
ಕಳೆದ 5 ವರ್ಷಗಳಿಂದ ಭತ್ತ ಬೆಳೆಯುತ್ತಿರುವ ನಂಜುಂಡಸ್ವಾಮಿಗೆ ಪ್ರಾರಂಭಿಕ ಹಂತದಲ್ಲಿ ಕಡಿಮೆ ಇಳುವರಿ ಬಂದಿತ್ತು. ನಂತರದ ವರ್ಷಗಳಲ್ಲಿ ಉತ್ತಮ ಇಳುವರಿ ಸಿಕ್ಕಿದೆಯಂತೆ. ಇವರು ಬೆಳೆಯುವ ಭತ್ತಕ್ಕೆ ಬೇಡಿಕೆ ಬರಲು ಮುಖ್ಯ ಕಾರಣ ಅವರು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಜಮೀನಲ್ಲಿ ಕಳೆ ಔಷಧ ಬಳಸದೆಯೇ ಕಳೆಯನ್ನು ನಿಯಂತ್ರಣ ಮಾಡುವುದು ಇವರ ವಿಶೇಷತೆ. ಇವರು ಸಸಿ ಮಡಿ ತಯಾರಿಸಿ ಇಪ್ಪತ್ತು ದಿನಕ್ಕೆ ನಾಟಿ ಮಾಡುತ್ತಾರೆ. ಗಂಜಲವನ್ನು ಗದ್ದೆಗೆ ಹಾಕುತ್ತಾರೆ. ಹಾಗೆಯೇ ಸಗಣಿ, ಮಜ್ಜಿಗೆಯನ್ನು ಹಾಕಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತಾರೆ. ಕೃಷಿ ವಿಜ್ಞಾನ ಕೇಂದ್ರದಿಂದ ಸಲಹೆ ಪಡೆದು ಕೃಷಿ ಮಾಡುತ್ತಾ ಬಂದಿದ್ದಾರೆ.

ಬೋರ್ ವೆಲ್ ನೀರನ್ನೇ ಬಳಸಿಕೊಂಡು ಭತ್ತ ಬೆಳೆಯುತ್ತಿದ್ದು, ಕೃಷಿಗೆ ಅಗತ್ಯವಿದ್ದಾಗ ಬಾಡಿಗೆಗೆ ಯಂತ್ರಗಳನ್ನು ಪಡೆದುಕೊಳ್ಳುತ್ತಾರೆ. ಭತ್ತ ಸೇರಿದಂತೆ ಬೆಳೆದ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆಯನ್ನು ಕೂಡ ತಾವೇ ಸೃಷ್ಟಿ ಮಾಡಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ ಅಕ್ಕಿ, ಇನ್ನಿತರೆ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರ ಕೈಗೆ ಸೇರುವಂತೆ ಮಾಡಿದ್ದಾರೆ. ಇದಕ್ಕಾಗಿ ಸ್ವಾಭಿಮಾನಿ ಸಾವಯವ ಬಳಗ ಎಂಬ ಗುಂಪು ರಚನೆ ಮಾಡಿಕೊಂಡಿದ್ದಾರೆ. ಇನ್ನು ಜಿಲ್ಲೆ, ತಾಲೂಕು ಮಟ್ಟದಲ್ಲಿ ಅಂಗಡಿ ತೆರೆದು ಅಕ್ಕಿ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಬರೀ ಕೃಷಿ ಮಾತ್ರವಲ್ಲದೆ ಅದಕ್ಕೆ ಮಾರುಕಟ್ಟೆ ಸೃಷ್ಟಿಸುವಲ್ಲಿಯೂ ರೈತ ನಂಜುಂಡಸ್ವಾಮಿ ಯಶಸ್ವಿಯಾಗಿರುವುದು ಗಮನಾರ್ಹವಾಗಿದೆ.












Click it and Unblock the Notifications