Mysuru Wadiyar Property: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ರಾಜಮನೆತnನದ ಆಸ್ತಿ: ಪ್ರಮೋದಾ ದೇವಿ ಪತ್ರದಿಂದ ಜನರಿಗೆ ಆತಂಕ
Pramod Devi Wadiyar: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ರಾಜಮನೆತನಕ್ಕೆ ಸೇರಿದ ಆಸ್ತಿ ಇದೆ. ಅದನ್ನು ರಕ್ಷಣೆ ಮಾಡಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಪತ್ರ ಬರೆದಿದ್ದರು. ಇದರಿಂದ ಇದೀಗ ಗ್ರಾಮವೊಂದರ ಜನರಿಗೆ ಆತಂಕ ಶುರುವಾಗಿದೆ.
ಮೈಸೂರು ಮಹಾರಾಜರಿಗೆ ಸೇರಿರುವ ಆಸ್ತಿಯನ್ನು ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದರಿಂದ ಇದೀಗ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರಿಗೆ ಆತಂಕ ಶುರು ಆಗಿದೆ.

ಸಿದ್ದಯ್ಯನಪುರದ ಮೂಲ ಹೆಸರೇ ಜಯಚಾಮರಾಜೇಂದ್ರ ಪುರಂ ಆಗಿದ್ದು, ಇದೀಗ ಈ ಊರಿನ ಜನರಿಗೆ ಊರು ಖಾಲಿ ಮಾಡಬೇಕಾದ ಆತಂಕ ಶುರುವಾಗಿದೆ. 4,000ಕ್ಕೂ ಹೆಚ್ಚು ಜನರು ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಇಂದಿಗೂ ಮಹಾರಾಜರ ಫೋಟೋವನ್ನು ಮನೆಯ ದೇವರ ಕೋಣೆಯಲ್ಲಿಟ್ಟುಕೊಂಡಿದ್ದಾರೆ ಈ ಗ್ರಾಮಸ್ಥರು. ಪ್ರತಿ ವರ್ಷ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಿ ಅವರ ಜನ್ಮ ದಿನ ಆಚರಣೆಯನ್ನೂ ಕೂಡ ಮಾಡಿಕೊಂಡು ಬರುತ್ತಿದ್ದಾರೆ.
ಜಯಚಾಮರಾಜೇಂದ್ರ ಒಡೆಯರ್ ನಮಗೆ 1,035 ಎಕರೆ ಭೂಮಿ ದಾನ ನೀಡಿದ್ದಾರೆ. 1982ರಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ. ಈಗಲೂ ಮಹಾರಾಜರ ಹೆಸರು ಹೇಳಿಕೊಂಡು ಜೀವನ ಮಾಡುತ್ತಿದ್ದಾವೆ. ಒಂದು ಪ್ರಮೋದಾದೇವಿ ಅವರಿಗೆ ಖಾತೆ ಮಾಡಿಕೊಟ್ಟರೆ, ಇಡೀ ಗ್ರಾಮಕ್ಕೆ ಗ್ರಾಮವೇ ಮೈಸೂರು ಅರಮನೆಗೆ ಹೋಗಿ ಅಲ್ಲಿ ಉಳಿಯಬೇಕಾಗುತ್ತದೆ. ಅವರೇ ನಮ್ಮ ಜೀವನಕ್ಕೆ ಆಧಾರವಾಗಬೇಕು ಎಂದು ಹೇಳುತ್ತಿದ್ದಾರೆ.
ರಾಜವಂಶಸ್ಥೆ ಪ್ರಮೋದಾದೇವಿ ಅವರಿಗೆ ಖಾತೆ ಮಾಡಿ ಕೊಟ್ಟರೆ ಊರನ್ನು ತೊರೆಯಬೇಕಾಗುತ್ತದೆ. ಆಮೇಲೆ ನಾವು ಎಲ್ಲಿ ಹೋಗಿ ಜೀವನ ಸಾಗಿಸಬೇಕು ಎಂದು ಸಿದ್ದಯ್ಯನಪುರ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಹಲವೆಡೆ 4,500ಕ್ಕೂ ಹೆಚ್ಚು ಹೆಕ್ಟೇರ್ ಭೂಮಿ ಮೈಸೂರು ಮಹಾರಾಜರ ಖಾಸಗಿ ಆಸ್ತಿ ಎಂದು ಪತ್ರದಲ್ಲಿ ಮೈಸೂರಿನ ರಾಜವಂಶಸ್ಥೆ ತಿಳಿಸಿದ್ದರು.
ಪ್ರಮೋದಾ ದೇವಿ ಬರೆದ ಪತ್ರದಲ್ಲೇನಿದೆ?: ಪತ್ರದಲ್ಲಿ ತಿಳಿಸಿರುವುದರಲ್ಲಿ ಸಿದ್ದಯ್ಯನಪುರ ಗ್ರಾಮವೂ ಕೂಡ ಬರುತ್ತದೆ. ಮೈಸೂರು ಮಹಾರಾಜರು ಹಾಗೂ ಭಾರತ ಸರ್ಕಾರದ ನಡುವೆ ಆಗಿರುವ ಒಪ್ಪಂದದ ಪ್ರಕಾರ 4,500 ಹೆಕ್ಟೇರ್‌ಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರದಲ್ಲಿ ಪ್ರಮೋದಾದೇವಿ ಉಲ್ಲೇಖ ಮಾಡಿದ್ದಾರೆ.












Click it and Unblock the Notifications