ಚಾಮರಾಜನಗರ: ಪ್ರಸಾದ ಸೇವಿಸಿ 25ಕ್ಕೂ ಅಧಿಕ ಮಂದಿಗೆ ವಾಂತಿ-ಭೇದಿ
ಚಾಮರಾಜನಗರ, ಆಗಸ್ಟ್, 28: ಹಾಸ್ಟೇಲ್, ಶಾಲೆಗಳಲ್ಲಿ ಕಲುಷಿತ ಊಟ ಸೇವನೆ ಮಾಡಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಪ್ರಕರಣಗಳು ದಾಖಲಾದ ಉದಾಹರಣೆಗಳಿವೆ. ಇನ್ನು ಇದೀಗ ಪ್ರಸಾದ ಸೇವನೆ ಮಾಡಿ 25ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಪಾಳ್ಯ ಗ್ರಾಮದಲ್ಲಿ ಮಂಗಳವಾರ ತಡರಾತ್ರಿವರೆಗೆ ಕೃಷ್ಣನ ಉತ್ಸವ ನಡೆದಿತ್ತು. ಮಧ್ಯರಾತ್ರಿ ಹಂಚಿದ ಪುಳಿಯೋಗರೆ ಮತ್ತು ಪಂಚಾಮೃತವನ್ನು ಹಲವರು ಇಂದು ಬೆಳಗ್ಗೆ 8 ಗಂಟೆಗೆ ಸೇವಿಸಿದ್ದು, ಬಳಿಕ ಈ ಘಟನೆ ನಡೆದದಿದೆ ಎನ್ನಲಾಗಿದೆ.

ಪ್ರಸಾದ ಸೇವನೆ ಮಾಡಿದ ಕೆಲವೇ ಗಂಟೆಗಳಲ್ಲಿ 25ಕ್ಕೂ ಅಧಿಕ ಮಂದಿ ವಾಂತಿ-ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. 17 ಮಂದಿ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸದ್ಯ ಇದೀಗ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಮತ್ತು ಪಾಳ್ಯ ನಿವಾಸಿ ಸಿದ್ದರಾಜು ಈ ಕುರಿತು ಮಾತನಾಡಿ, ರಾತ್ರಿ ಕೊಟ್ಟಿದ್ದ ಪ್ರಸಾದವನ್ನು ಇಂದು (ಆಗಸ್ಟ್ 28) ಬೆಳಗ್ಗೆ ಸೇವನೆ ಮಾಡಿದ ಬಳಿಕ ತಲೆ ಸುತ್ತಿದಂತಾಗಿ ಕಣ್ಣೇ ಕಾಣದಂತಾಗಿದೆ. ಬಳಿಕ, ವಾಂತಿ-ಭೇದಿ ಕೂಡ ಆಯಿತು, ಆಸ್ಪತ್ರೆಗೆ ಬಂದ ಬಳಿಕ ಚೇತರಿಸಿಕೊಂಡೆವು ಎಂದರು.
ವಿದ್ಯಾರ್ಥಿಗಳು ಅಸ್ವಸ್ಥ: ಇತ್ತೀಚೆಗಷ್ಟೇ ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್, ಜಂಪಯ್ಯನಹಟ್ಟಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಊಟ ಸೇವಿಸಿ ಅಸ್ವಸ್ಥಗೊಂಡಿದ್ದರು. ಇನ್ನು ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ (ಜೂನಿಯರ್ ವಾರ್ಡನ್) ಲಕ್ಷ್ಮೀದೇವಿ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದರು.
ಅನ್ನೇಹಾಳ್, ಜಂಪಯ್ಯನಹಟ್ಟಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಜುಲೈ 12ರಂದು ರಾತ್ರಿ ಊಟ ಸೇವನೆ ಬಳಿಕ ಸುಮಾರು 8ರಿಂದ 09 ಮಕ್ಕಳಿಗೆ ಎದೆಉರಿ, ಹೊಟ್ಟೆಯಲ್ಲಿ ಉರಿ ಹಾಗೂ ವಾಂತಿ ಆಗಿ ಅಸ್ವಸ್ಥಗೊಂಡಿದ್ದರು. ಬಳಿಕ ಇವರಿಗೆ ಸಮೀಪದ ಗೊಡಬನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಇನ್ನು ಚಿಕಿತ್ಸೆ ಬಳಿಕ ಮಕ್ಕಳು ಗುಣಮುಖರಾಗಿದ್ದು, ಆರೋಗ್ಯ ಸುರಕ್ಷತಾ ಅಧಿಕಾರಿಗಳು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಕಾಯಿಸಿ ಆರಿಸಿದ ನೀರನ್ನು ಕೊಡಬೇಕು. ನಿಲಯದಲ್ಲಿ ಕೆಟ್ಟಿರುವ ವಾಟರ್ ಪ್ಯೂರಿಫೈಯರ್ ದುರಸ್ತಿಪಡಿಸಲು ಸೂಚನೆ ನೀಡಿದ್ದರು. ಬಳಿಕ ಘಟನೆ ಬಗ್ಗೆ ನಿಲಯದ ವಾರ್ಡನ್‌ಗೆ ಸಮಾಜಾಯಿಷಿ ನೀಡುವಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.












Click it and Unblock the Notifications