ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಪಡೆಯಲು ಹಣ ವಿತರಣೆ!
ಚಾಮರಾಜನಗರ, ಜನವರಿ 26: ಗ್ರಾಮ ಪಂಚಾಯತಿ ಚುನಾವಣೆ ಮುಗಿದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟವಾಗುತ್ತಿದೆ. ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳ ಮುಖಂಡರು ನಾನಾ ರೀತಿಯ ಕಸರತ್ತುಗಳನ್ನು ನಡೆಸುತಿದ್ದಾರೆ.
ಗ್ರಾಮ ಪಂಚಾಯಿತಿ ಅಧಿಕಾರಕ್ಕಾಗಿ ಧರ್ಮಸ್ಥಳದ ಮಂಜುನಾಥ ದೇವಾಲಯದ ಮುಂದೆ ಆಣೆ ಪ್ರಮಾಣ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈಗ ದೇವಾಲಯದ ಮುಂಭಾಗ ಹಣದ ಕಂತೆಗಳನ್ನು ನೀಡುತ್ತಿರುವ ಚಿತ್ರಗಳು ವೈರಲ್ ಆಗಿದ್ದು, ಹಣ ವಿತರಣೆ ಮಾಡುತ್ತಿರುವುದು ಖಚಿತವಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ನಾಯಕರ ಬಡಾವಣೆಯ ಹುಚ್ಚಪ್ಪನ ದೇವಾಲಯದ ಮುಂಭಾಗ ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ಹಣ ಹಂಚಿಕೆ ಮಾಡಲಾಗಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹಣದ ಕಂತೆಗಳನ್ನು ವಿತರಿಸುತ್ತಿರುವ ಚಿತ್ರಗಳು ಹರಿದಾಡುತ್ತಿವೆ.

ಕೌದಳ್ಳಿ ಗ್ರಾಮ ಪಂಚಾಯಿತಿ 23 ಸದಸ್ಯ ಬಲಹೊಂದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 15, ಬಿಜೆಪಿ ಬೆಂಬಲಿತ 6 ಮತ್ತು ಜೆಡಿಎಸ್ ಬೆಂಬಲಿತ ಇಬ್ಬರು ಗೆಲುವು ಸಾಧಿಸಿದ್ದಾರೆ. ಪಂಚಾಯಿತಿಗೆ ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೂ ಉಪಾಧ್ಯಕ್ಷ ಹುದ್ದೆ ಪರಿಶಿಷ್ಠ ಜಾತಿ ಮಹಿಳೆಗೂ ಮೀಸಲಾಗಿದೆ. ಜನವರಿ 28ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿದೆ.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ
ಈ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಲಭಿಸಿದೆ. ಆದರೂ ಕೂಡ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂಬ ಹಠಕ್ಕೆ ಬಿದ್ದಿರುವ ಮಂಜುನಾಥ್, ಮಲ್ಲಯ್ಯನಪುರ ರವಿ, ಪುದುನಗರ ಟಿ.ಎಂ.ನಾರಾಯಣ, ಎಂ.ಟಿ.ದೊಡ್ಡಿ ವಾರ್ಡ್ ನಿಂದ ಗೆದ್ದಿರುವ ಗ್ರಾಮ ಪಂಚಾಯಿತಿ ಸದಸ್ಯೆಯ ಪುತ್ರ ಅನಿಲ್ ಕುಮಾರ್ ಸೇರಿದಂತೆ ಕೆಲ ಸದಸ್ಯರಿಗೆ ಹಣವನ್ನು ನೀಡಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಹುಮತಕ್ಕೆ ಬೇಕಾದ ಇನ್ನಷ್ಟು ಸದಸ್ಯರನ್ನು ಮೈತ್ರಿ ಪಕ್ಷಕ್ಕೆ ಕರೆತರುವಂತೆ ಸೂಚನೆ ನೀಡಿ ನೂತನ ಸದಸ್ಯರುಗಳಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಲು 2 ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೂ ಈ ಚಿತ್ರಗಳು ಬಂದಿವೆ.
ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.












Click it and Unblock the Notifications