ಫೆ. 17ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಬೃಹತ್ ಪಾದಯಾತ್ರೆ
ಚಾಮರಾಜನಗರ, ಫೆಬ್ರವರಿ 08: ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಇದೇ ಫೆ. 17ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ರೈತರಿಂದ ಬೃಹತ್ ಟ್ರ್ಯಾಕ್ಟರ್ ಎತ್ತಿನ ಗಾಡಿ ಹಾಗೂ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರ ವಿವಿಧ ಬೇಡಿಕೆಗಳಾದ ಪ್ರಸಕ್ತ ಸಾಲಿನ ಕಬ್ಬಿಗೆ 5500 ನಿಗದಿ ಮಾಡಬೇಕು, ಕಳೆದ ಸಾಲಿನ 950 ಕೋಟಿ ರೈತರಿಗೆ ತಕ್ಷಣ ಕೊಡಬೇಕು ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು. ರೈತರ ಹಾಲಿನ ಪ್ರೋತ್ಸಾಹಧನ ಸುಮಾರು 800 ಕೋಟಿ ರೂನಷ್ಟು ಬರಬೇಕಾಗಿದೆ ತಕ್ಷಣ ಅದನ್ನು ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೈಕ್ರೋ ಫೈನಾನ್ಸ್ ಹಾವಳಿಯಿಂದ ತತ್ತರಿಸಿರುವ ರೈತರಿಗೆ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಸಿಗುವಂತೆ ಕ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿ ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ಮೇಲೆ ಕ್ರಮ ಕೈಗೊಳ್ಳಬೇಕು. ಬಗರುಹುಕುಂ ಸಾಗುವಳಿದಾರರ ಸಾಗುವಳಿ ಚೀಟಿಯನ್ನು ತಕ್ಷಣ ನೀಡಬೇಕು. ಇಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಎಂಎಸ್ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕು. ಕೃಷಿ ವಿದ್ಯುತ್ ಖಾಸಗಿಕರಣ ಮಾಡುವುದನ್ನು ತಕ್ಷಣ ಕೈ ಬಿಟ್ಟು ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು.
ರೈತರ ಕೃಷಿ ಪಂಷಟ್ಟಿಗಳ ಸಂಪರ್ಕವನ್ನು ಕಡಿತ ಮಾಡುತ್ತಿರುವುದನ್ನು ತಕ್ಷಣ ಕೈಬಿಡಬೇಕು. ರೈತರಿಂದ ಹಣವನ್ನು ಕಟ್ಟಿಸಿಕೊಂಡು ಕೃಷಿ ಪಂಪ್ ಸೆಟ್ ಗಳಿಗೆ ಸಂಪರ್ಕವನ್ನು ಮುಂದುವರಿಸಬೇಕು. ಸಾಲಕ್ಕೆ ಸಿಬಿಲ್ ಸ್ಕೋರ್ ನ್ನು ಪರಿಗಣಿಸಬಾರದು ಆರ್ ಟಿ ಸಿ ಗಳಲ್ಲಿ ವಕ್ಫ್ ಮಂಡಳಿಯ ಹೆಸರು ಬಂದಿರುವುದನ್ನು ತಿದ್ದುಪಡಿ ಮಾಡಲು ಆದೇಶವನ್ನು ಗೆಜೆಟ್ ನೋಟಿಫಿಕೇಶನ್ ಅಲ್ಲಿ ಪ್ರಕಟಿಸಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಹೊಂದಿರುವ ರೈತರಿಗೆ ವೈಜ್ಞಾನಿಕವಾಗಿ ಬೆಳೆ ನಷ್ಟವನ್ನು ನೀಡಬೇಕು.
ಅತಿವೃಷ್ಟಿ ಅನಾವೃಷ್ಟಿಯಿಂದ ನೊಂದಿರುವ ರೈತರಿಗೆ ವೈಜ್ಞಾನಿಕವಾಗಿ ಬೆಳೆ ನಷ್ಟ ನೀಡಲು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ನಬಾರ್ಡ್ ನ ಕೃಷಿ ಸಾಲಕ್ಕೆ ಕೊಡುವ ಯೋಜನೆಗಳನ್ನು ಕಡಿತಗೊಳಿಸಿರುವುದನ್ನು ಪುನರ್ ಪರಿಶೀಲನೆ ಮಾಡಿಕೊಳ್ಳಬೇಕು. ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಕೃಷಿ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಮಾಡುವುದರಲ್ಲಿ ರೈತರನ್ನು ಜಾಯಿಂಟ್ ವೆಂಚರ್ ಎಂದು ಪರಿಗಣಿಸಿ ರೈತರ ಪಾಲುದಾರರಾಗಿ ಮುಂದುವರಿಸಬೇಕು.
ರಾಜ್ಯದಲ್ಲಿ ಅರಣ್ಯದಂಚಿನಲ್ಲಿರುವ ರೈತರ ಕೃಷಿ ಭೂಮಿಯನ್ನು ಸರ್ಕಾರ ಹೊಸಪಡಿಸಿಕೊಳ್ಳುವುದನ್ನು ಕೈಬಿಡಬೇಕು. ಈ ಮೇಲ್ಕಂಡ ವಿಚಾರಗಳನ್ನು ಇಟ್ಟುಕೊಂಡು ಇದೇ 17 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಕ್ಯಾಬಿನೆಟ್ ಸಭೆಗೆ ಪರ್ಯಾಯವಾಗಿ ರೈತರ ಹಕ್ಕುಗಳ ಬಗೆ ಗಮನ ಸೆಳೆಯಲು ಟ್ಯಾಕ್ಟರ್ ಎತ್ತಿನಗಾಡಿ ಹಾಗೂ ಕಾಲ್ನಡಿಗೆಯಿಂದ ಪಾದಯಾತ್ರೆ ಮುಖಾಂತರ ರೈತರ ಪರ್ಯಾಯ ಕ್ಯಾಬಿನೆಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ರೈತರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮನವಿ ಮಾಡಿದರು.












Click it and Unblock the Notifications