ಜು.19ರಿಂದ ಮೂರು ದಿನ ಮಲೆ ಮಹದೇಶ್ವರ ದೇಗುಲ ಬಂದ್
ಚಾಮರಾಜನಗರ, ಜುಲೈ 18: ಸಾರ್ವಜನಿಕರ ಮತ್ತು ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಶ್ರಾವಣ ಮಾಸದ ಎಣ್ಣೆ ಮಜ್ಜನ ಮತ್ತು ಭೀಮನ ಅಮವಾಸ್ಯೆ ನಿಮಿತ್ತ ಭಕ್ತಾದಿಗಳ ಪ್ರವೇಶವನ್ನು ಜುಲೈ 19 ರಿಂದ 21ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶ ಹೊರಡಿಸಿದ್ದಾರೆ.
Recommended Video
ಜುಲೈ 20ರಂದು ಭೀಮನ ಅಮಾವಾಸ್ಯೆಯಿದೆ. ಶ್ರಾವಣ ಮಾಸದ ಆರಂಭ ಮತ್ತು ಭೀಮನ ಅಮಾವಾಸ್ಯೆ ವೇಳೆ ಮಾದಪ್ಪನ ಸನ್ನಿಧಿಗೆ ಲಕ್ಷಾಂತರ ಭಕ್ತರು ಬರುತ್ತಿದ್ದರು. ಆದರೆ ಈ ಬಾರಿ ನಾಳೆಯಿಂದ ಮಂಗಳವಾರದವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾತ್ರ ಸರ್ಕಾರಿ ಕೆಲಸ ನಿಮಿತ್ತ ಕಾರಣ ಪ್ರವೇಶ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ಶ್ರಾವಣ ಮಾಸದ ಪ್ರಯುಕ್ತ ಜುಲೈ 21ರಂದು ಮಂಗಳವಾರ 108 ಕುಂಭಾಭಿಷೇಕ, ಸಹಸ್ರ ಅಭಿಷೇಕ ಪೂಜೆಗಳು ನಡೆಯುತ್ತವೆ. ಪೂಜೆಗಳನ್ನು ಧಾರ್ಮಿಕ ವಿಧಿವಿಧಾನಗಳಲ್ಲಿ ಶಾಸ್ತ್ರೋಕ್ತವಾಗಿ ದೇವಸ್ಥಾನದ ಒಳ ಆವರಣದಲ್ಲಿ ಕೈಗೊಳ್ಳಲು ನಿರ್ಧರಿಸಲಾಗುತ್ತದೆ.
ಜಿಲ್ಲೆಯ ಎಲ್ಲ ದೇವಾಲಯಗಳಿಗೂ ನಿಷೇಧ ಅನ್ವಯವಾಗಲಿದ್ದು, ಬಿಳಿಗಿರಿರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಚಾಮರಾಜೇಶ್ವರ ದೇಗುಲ ಸೇರಿದಂತೆ ಐದು ತಾಲೂಕುಗಳ ದೇವಾಲಯಕ್ಕೂ ಈ ಆದೇಶ ಅನ್ವಯವಾಗಲಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications