Male Mahadeshwara Hill: ಕೇವಲ ಮೂರೇ ದಿನಕ್ಕೆ 1.23 ಕೋಟಿ ಒಡೆಯನಾದ ಮಲೆ ಮಾದಪ್ಪ
Male Mahadeshwara Hill: ಹಾನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ಮಹಾಲಯ ಅಮವಾಸ್ಯೆ ಜಾತ್ರಾ ಮಹೋತ್ಸವ ಆಚರಣೆ ಮಾಡಿದ್ದರು. ಈ ಸಮಯದಲ್ಲಿ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ ಕೇವಲ ಮೂರು ದಿನಗಳ ಅವಧಿಯಲ್ಲಿ 1.23 ಕೋಟಿ ಆದಾಯ ಹರಿದುಬಂದಿದೆ.
ಸೆಪ್ಟೆಂಬರ್ 30, ಅಕ್ಟೋಬರ್ 1 ಹಾಗೂ 2ರ ಅವಧಿಯಲ್ಲಿ ನಡೆದ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹುಲಿ ವಾಹನ, ರುದ್ರಾಕ್ಷಿ ವಾಹನ ಬಸವ ಮಂಟಪ, ಲಾಡು ಮಾರಾಟ, ವಿವಿಧ ಸೇವೆಗಳು ಅಕ್ಕಿ ಸೇವೆ, ಮಿಶ್ರ ಪ್ರಸಾದ, ಪುದುವಟ್ಟು, ಮಾಹಿತಿ ಕೇಂದ್ರ ಹಾಗೂ ತಾಳಬೆಟ್ಟ ಭವನಗಳಿಂದ, ಪಾರ್ಕಿಂಗ್, ಕಲ್ಲುಸಕ್ಕರೆ, ತೀರ್ಥ, ಬ್ಯಾಗ್ ಮಾರಾಟದಿಂದ 1,23,91,458 ರೂಪಾಯಿ ಆದಾಯ ಬಂದಿದೆ.

ಮೂರು ದಿನಗಳ ಅವಧಿಯಲ್ಲಿ ವಿವಿಧ ಉತ್ಸವಗಳಾದ 468 ಚಿನ್ನದ ರಥೋತ್ಸವ, 34 ಬೆಳ್ಳಿ ರಥೋತ್ಸವ, 574 ಬಸವ ವಾಹನ, 7,112 ಹುಲಿ ವಾಹನ, 288 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಕೆ ಮೂಲಕ 38,48,251 ರೂಪಾಯಿ ಆದಾಯ ಬಂದಿದೆ. ಅಕ್ಟೋಬರ್ 3ರಿಂದ ನವರಾತ್ರಿ ಪ್ರಾರಂಭವಾಗಿದ್ದು, ದೀಪಾವಳಿ ಕಾರ್ತಿಕ ಮಾಸ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಇನ್ನು ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.
ಅಕ್ಟೋಬರ್ 3ರಿಂದ ನವರಾತ್ರಿ ಪೂಜೆ ಮಹೋತ್ಸವ ಪ್ರಾರಂಭವಾಗಿದ್ದು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾನವಮಿ ಆಯುಧ ಪೂಜೆ, ವಿಜಯದಶಮಿ, ದೀಪಾವಳಿ ಜಾತ್ರಾ ಮಹೋತ್ಸವ ಕಾರ್ತಿಕ ಮಾಸ ಪ್ರಾರಂಭವಾಗುವುದರಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ಸಹಕಾರದ ವತಿಯಿಂದ ಮಹಾಲಯ ಜಾತ್ರಾ ಅಮಾವಾಸ್ಯೆ ಯಶಸ್ವಿಯಾಗಿ ನೆರವೇರಿದೆ. ಮುಂದಿನ ದಿನಗಳಲ್ಲಿ ವಿಜಯದಶಮಿ ಹಾಗೂ ದೀಪಾವಳಿ ಜಾತ್ರಾ ಮಹೋತ್ಸವ ಇರುವ ಹಿನ್ನೆಲೆ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು
ಎ.ಈ.ರಘು ತಿಳಿಸಿದ್ದಾರೆ.
1.76 ಕೋಟಿ ರೂಪಾಯಿ ಸಂಗ್ರಹ: ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಆಗಸ್ಟ್ 29ರಂದು ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಕೇವಲ ಒಂದು ತಿಂಗಳ ಅವಧಿಯಲ್ಲಿ 1.76 ಕೋಟಿ ರೂಪಾಯಿ ಸಂಗ್ರಹವಾಗಿದೆ. ಹಾಗಾದರೆ ಎಷ್ಟು ವಿದೇಶಿ ಕರೆನ್ಸಿ ಪತ್ತೆಯಾಗಿವೆ ಎನ್ನಿವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 4:30 ಗಂಟೆಯವರೆಗೂ ನಡೆಯಿತು.
ಭೀಮನ ಅಮಾವಾಸ್ಯೆ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು , ಈ ವೇಳೆ ಹರಕೆಯ ರೂಪದಲ್ಲಿ 1,76,29,849 ನಗದು 45 ಗ್ರಾಂ ಚಿನ್ನ ಹಾಗೂ 1.300 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ಈ ಹುಂಡಿಯಿಂದ 2,96,469 ರೂಪಾಯಿ ಮೌಲ್ಯದ ಬೇರೆ ದೇಶದ ಕರೆನ್ಸಿಗಳು ಪತ್ತೆಯಾಗಿವೆ. 20 ಯುಎಸ್‌ಎ ಡಾಲರ್, ಥಾಯ್ಲ್ಯಾಂಡ್ 1 ಒಂದು, ಶ್ರೀಲಂಕಾ 2, ಅರಬ್ 3 ನೋಟು ಸೇರಿದಂತೆ ಇತರ ದೇಶಗಳ ನೋಟುಗಳನಗನು ಹುಂಡಿಗೆ ಹಾಕಿದ್ದಾರೆ. ಅಲ್ಲದೆ, ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 11 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ.
ಈ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾ ಅಧೀಕ್ಷಕ ನಾಗೇಶ್, ಜಿಲ್ಲಾಡಳಿತ ಕಚೇರಿ ಮುಜರಾಯಿ ಶಾಖೆಯ ಭಾರತಿ, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.












Click it and Unblock the Notifications