ಮಲೆ ಮಹದೇಶ್ವರ ಸ್ವಾಮಿ ದೇಗುಲ ಹುಂಡಿಯಲ್ಲಿ 28 ದಿನದಲ್ಲಿ ಸಂಗ್ರಹವಾಗಿದ್ದು ಎಷ್ಟು ಹಣ?
ನಂಬಿ ಬಂದ ಭಕ್ತರ ಮಾದಪ್ಪ ಎಂದಿಗೂ ಕೈಬಿಡಲ್ಲ, ಸಂಕಷ್ಟದಲ್ಲಿ ಪರದಾಡುವ ಜನರ ಕೈಹಿಡಿದು ನಡೆಸುತ್ತಾನೆ ಈ ಸ್ವಾಮಿ. ಹೀಗಾಗಿ ಕೋಟ್ಯಂತರ ಭಕ್ತ ಸಮೂಹ ಮಹದೇಶ್ವರ ಸ್ವಾಮಿಗೆ ನಮಿಸುತ್ತಾರೆ. ಮಹದೇಶ್ವರ ಸ್ವಾಮಿ ನೆಲೆಸಿರುವ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಪೂಜೆ ಸಲ್ಲಿಸುತ್ತಾರೆ. ಹಾಗೇ ಸ್ವಾಮಿ ದರ್ಶನ ಪಡೆದು, ಭಕ್ತರು ಸಲ್ಲಿಸುವ ಕಾಣಿಕೆ ಹಣವನ್ನು ಇಂದು ಎಣಿಕೆ ಮಾಡಲಾಯಿತು.
ಕರ್ನಾಟಕದ ನೆಲದಲ್ಲಿ ಐತಿಹಾಸಿಕ ಹಿನ್ನೆಲೆ ಇರುವ ದೇಗುಲಗಳ ಪೈಕಿ ಮಹದೇಶ್ವರ ಬೆಟ್ಟ ಮೊದಲ ಸ್ಥಾನ ಪಡೆಯುತ್ತದೆ ಎಂಬ ಪ್ರತೀತಿ ಇದೆ. ಕರ್ನಾಟಕ ಮಾತ್ರವಲ್ಲ, ನೆರೆ ರಾಜ್ಯ ಹಾಗೂ ದೂರದ ಊರುಗಳಿಂದಲೂ ಜನ ಮಹದೇಶ್ವರ ಬೆಟ್ಟಕ್ಕೆ ಬಂದು ಸ್ವಾಮಿ ದರ್ಶನ ಪಡೆದು ನಮಿಸುತ್ತಾರೆ. ಹಾಗೇ ಕಾಣಿಕೆ ಸಂಗ್ರಹ ವಿಚಾರದಲ್ಲಿ ಕೂಡ ಈ ದೇಗುಲ ಮುಂದೆ ಇದ್ದು, ಈಗ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿದೆ.

ಮಾದಪ್ಪನ ಸನ್ನಿಧಿಯಲ್ಲಿ ಒಟ್ಟು 2.10...
ಹೌದು, ಚಾಮರಾಜನಗರದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಕಳೆದ 28 ದಿನಗಳಲ್ಲಿ 2.10 ಕೋಟಿ ರೂಪಾಯಿ ನಗದು ಸಂಗ್ರಹ ಆಗಿದೆ. ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣ ಸಮೀಪದ, ವಾಣಿಜ್ಯ ಸಂಕೀರ್ಣದಲ್ಲಿ ಇಂದು ಹುಂಡಿ ಹಣದ ಎಣಿಕೆ ಕಾರ್ಯ ನಡೆಯಿತು. ಸಾಲೂರು ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಶ್ರೀಗಳು ಈ ವೇಳೆ ಸಾನಿಧ್ಯ ವಹಿಸಿದ್ರು. ಹಾಗೆ ಇಂದು ಬೆಳಗ್ಗೆ 8 ಗಂಟೆ ಸಮಯಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಶುರು ಆಗಿದ್ದ ಹುಂಡಿ ಎಣಿಕೆ ಕಾರ್ಯ ಇಂದು ಸಂಜೆ 7 ಗಂಟೆ ವೇಳೆಗೆಲ್ಲಾ ಮುಕ್ತಾಯವಾಗಿದೆ.
ಎಣಿಕೆ ವೇಳೆ ಯಾರೆಲ್ಲಾ ಹಾಜರಿದ್ದರು?
ಅಷ್ಟಕ್ಕೂ ಈ ಬಾರಿ ಮಹದೇಶ್ವರ ಸ್ವಾಮಿ ಹುಂಡಿಯಲ್ಲಿ ಕಳೆದ 28 ದಿನದಲ್ಲಿ 2,10,78,014 ಅಂದರೆ 2 ಕೋಟಿ 10 ಲಕ್ಷದ 78 ಸಾವಿರದ 14 ರೂಪಾಯಿ ಸಂಗ್ರಹವಾಗಿದೆ. ಮತ್ತೊಂದು ಕಡೆ ಹುಂಡಿ ಎಣಿಕೆ ಪ್ರಕ್ರಿಯೆ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪಕಾರ್ಯದರ್ಶಿ ಚಂದ್ರಶೇಖರ್ ಜಿ.ಎಲ್., ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿವರ್ಗ, ಬ್ಯಾಂಕಿನ ಅಧಿಕಾರಿಗಳು ಹಾಜರಿದ್ದರು. ಮಲೆ ಮಹದೇಶ್ವರಬೆಟ್ಟ ಠಾಣೆಯ ಪೊಲೀಸರು ಈ ವೇಳೆ ಬಿಗಿ ಭದ್ರತೆ ಏರ್ಪಡಿಸಿದ್ದರು.
ಚಿನ್ನ ಮತ್ತು ಬೆಳ್ಳಿ ಸಂಗ್ರಹ ಎಷ್ಟು?
ಈ ನಡುವೆ ಹುಂಡಿಯಲ್ಲಿ ಸಂಗ್ರಹವಾಗಿರುವ, ಚಿನ್ನ ಮತ್ತು ಬೆಳ್ಳಿ ಮೌಲ್ಯಮಾಪನ ಕಾರ್ಯ ಇನ್ನೂ ನಡೆದಿಲ್ಲ. ಈ ಹಿಂದೆ ಪ್ರತಿ ಬಾರಿ, ಹುಂಡಿ ಎಣಿಕೆ ಕಾರ್ಯದ ವೇಳೆ ಚಿನ್ನ & ಬೆಳ್ಳಿ ಮೌಲ್ಯಮಾಪನ ನಡೆಯುತ್ತಿತ್ತು. ಆದ್ರೆ ಈ ಬಾರಿ ಮೌಲ್ಯಮಾಪಕರು ಗೈರಾದ ಹಿನ್ನೆಲೆಯಲ್ಲಿ ಮೌಲ್ಯಮಾಪನ ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಹುಂಡಿಯಲ್ಲಿ ಸಂಗ್ರವಾಗಿದ್ದ ಚಿನ್ನ & ಬೆಳ್ಳಿಯನ್ನ ಚೀಲದಲ್ಲಿ ಹಾಕಿ ಸೀಲ್ ಮಾಡಲಾಗಿದೆ.
ಹರಿದು ಬಂದಿತ್ತು ಭಕ್ತ ಸಾಗರ
ಮತ್ತೊಂದು ಕಡೆ ಇದು ಹಬ್ಬಗಳ ಸಮಯವಾದ ಕಾರಣ, ಕಳೆದ 28 ದಿನಗಳ ಅವಧಿಯಲ್ಲಿ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದಿದ್ದರು. ಇದೇ ಅವಧಿಯಲ್ಲಿ ಮಹಾಲಯ ಅಮಾವಾಸ್ಯೆ, ನವರಾತ್ರಿ ಮಹೋತ್ಸವ, ಆಯುಧ ಪೂಜೆ, ವಿಜಯದಶಮಿಯ ಸಂಭ್ರಮ ಮೇಳೈಸಿತ್ತು. ಈ ಹಿನ್ನೆಲೆ ಕರ್ನಾಟಕದ ಮೂಲೆ ಮೂಲೆಯಿಂದ ಮತ್ತು ದೇಶದ ಹಲವು ರಾಜ್ಯಗಳಿಂದ ಬಂದಿದ್ದ ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು.
ಒಟ್ನಲ್ಲಿ ಮಹದೇಶ್ವರ ಸ್ವಾಮಿ ಸನ್ನಿಧಾನ ಕಾಣಿಕೆ ಹಣದ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಹಾಗೇ ಈ ವೇಳೆ ಮಹದೇಶ್ವರಬೆಟ್ಟ ಠಾಣೆಯ ಪೊಲೀಸರು ಕೂಡ ಭದ್ರತೆಯನ್ನ ಒದಗಿಸಿ, ಹುಂಡಿ ಹಣದ ಎಣಿಕೆ ಕಾರ್ಯಕ್ಕೆ ಯಾವುದೇ ರೀತಿ ಅಡೆತಡೆ ಎದುರಾಗದಂತೆ ನೋಡಿಕೊಂಡರು.












Click it and Unblock the Notifications