ಬಂಡೀಪುರದಲ್ಲಿ ಆರದ ಬೆಂಕಿ;ವನ್ಯ ಪ್ರಾಣಿಗಳು ಸಾವು, ಸಾವಿರಾರು ಎಕರೆ ಅರಣ್ಯ ನಾಶ
ಮೈಸೂರು, ಫೆಬ್ರವರಿ 24:ಬಂಡೀಪುರ ವಲಯದ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕಾಣಿಸಿಕೊಂಡ ಕಾಡ್ಗಿಚ್ಚು ಕ್ಷಣಕ್ಷಣಕ್ಕೂ ಅರಣ್ಯ ಪ್ರದೇಶದಲ್ಲಿ ವ್ಯಾಪಿಸುತ್ತಲೇ ಇದೆ.
ನಿನ್ನೆ ಶನಿವಾರ (ಫೆ.23) ರಾತ್ರಿಯಾದರೂ ಬೆಂಕಿ ನಿಯಂತ್ರಣಕ್ಕೆ ಬಾರದೆ ಬಂಡೀಪುರ ಸಫಾರಿ ವಲಯಕ್ಕೂ ವ್ಯಾಪಿಸಿ ಧಗಧಗನೆ ಉರಿಯುತ್ತಿದ್ದು, ಅರಣ್ಯ ಇಲಾಖೆ ವಲಯ ಕಚೇರಿ ಪ್ರದೇಶಕ್ಕೂ ವ್ಯಾಪಿಸಿದೆ. ಉರಿಯ ಜ್ವಾಲೆಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಅಕ್ಷರಶಃ ನಾಶವಾಗಿದೆ.
ಮೈ ನಡುಗಿಸುವ ಕಾಡ್ಗಿಚ್ಚು ಶನಿವಾರ ಸಂಜೆ ನಂತರ ಬಂಡೀಪುರ ಚೆಕ್ ಪೋಸ್ಟ್ ಬಳಿ ಕಾಣಿಸಿಕೊಂಡು ದಟ್ಟ ಹೊಗೆ ಸೃಷ್ಟಿಯಾಯಿತು. ಇದರಿಂದ ಮೈಸೂರು-ಊಟಿ ರಸ್ತೆ, ಬಂಡೀಪುರ ಚೆಕ್ ಪೋಸ್ಟ್ ಬಳಿ ವಾಹನ ಸಂಚಾರ ಬಂದ್ ಮಾಡಲಾಯಿತು. ಇದರಿಂದ ಕೆಲ ಕಾಲ ಚೆಕ್ ಪೋಸ್ಟ್ ಬಳಿ ಗೊಂದಲ ಆತಂಕ ಸೃಷ್ಟಿಯಾಯಿತು.
ರಸ್ತೆ ಸಂಚಾರ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಕೆಲವು ವಾಹನ ಸವಾರರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಮೈಸೂರಿನತ್ತ ತೆರಳಿದರು.
ಮೊದಲಿಗೆ ಶುಕ್ರವಾರ ಕುಂದಕೆರೆ ವಲಯದಲ್ಲಿ ಬೆಂಕಿ ಬಿದ್ದು, ನೂರಾರು ಎಕರೆಯ ಸಂಪೂರ್ಣ ನಾಶವಾಗಿತ್ತು. ಇನ್ನೇನು ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಇನ್ನೊಂದು ಕಡೆ ಬೆಂಕಿ ಹೊತ್ತಿಕೊಂಡಿತು.

ಸಾವಿರಾರು ಎಕರೆ ಕಾಡು ನಾಶ
ಶನಿವಾರ ಮಧ್ಯಾಹ್ನ ಗೋಪಾಲಸ್ವಾಮಿ ಬೆಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸಾವಿರಾರು ಎಕರೆ ಕಾಡು ಬೆಂಕಿಗಾಹುತಿಯಾಗಿದೆ. ಅಲ್ಲಿಗೆ ನಿಲ್ಲದ ಬೆಂಕಿ ಬಂಡೀಪುರ ಚೆಕ್ ಪೋಸ್ಟ್ ತನಕ ವ್ಯಾಪಿಸಿದೆ. ಶನಿವಾರ ಸಂಜೆ ಚೆಕ್ ಪೋಸ್ಟ್ ಬಳಿಯೇ ಭಾರೀ ಪ್ರಮಾಣದ ಬೆಂಕಿ ಬಿದ್ದಿದ್ದು, ಸಾವಿರಾರು ಎಕರೆ ಕಾಡು ನಾಶವಾಗಿದೆ.

ಪ್ರಾಣಿ-ಪಕ್ಷಿಗಳು ಸಾವು
ಕಾಡಿಗೆ ಬೆಂಕಿ ಬಿದ್ದ ಪರಿಣಾಮ ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳು ಸಾವಿಗೀಡಾಗಿದ್ದು, ಉಳಿದ ಕಾಡು ಪ್ರಾಣಿಗಳು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡೀಪುರ ಗೋಪಾಲಸ್ವಾಮಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಾಕಷ್ಟು ಜಿಂಕೆಗಳು, ಕೋತಿಗಳು, ಹಾವು, ಕಾಡು ಹಂದಿ, ಮೊಲ, ನವಿಲು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳ ಪ್ರಾಣಕ್ಕೆ ತೊಂದರೆಯಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.

ಖಚಿತ ಮಾಹಿತಿ ಸಿಕ್ಕಿಲ್ಲ
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಂಕಿ ಬಿದ್ದಿರುವುದರಿಂದ ಹಾಗೂ ಬೆಂಕಿಯ ತೀವ್ರತೆ ಮತ್ತು ಹೊಗೆಯ ಪ್ರಮಾಣ ಹೆಚ್ಚಾಗಿದ್ದರಿಂದ ಎಷ್ಟೇ ಪ್ರಯತ್ನಪಟ್ಟರು ಬೆಂಕಿಯನ್ನು ನಂದಿಸಲಾಗದ ಸ್ಥಿತಿಯಲ್ಲಿದ್ದರಿಂದ ಕಾಡು ಪ್ರಾಣಿಗಳು ಬೆಂಕಿಗೆ ಸಿಲುಕಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

ಕಾಡ್ಗಿಚ್ಚನ್ನು ತಡೆಯಲು ಸಂಪೂರ್ಣ ವಿಫಲ
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕಾಡಿನ ಭಾಗ ಸಂಪೂರ್ಣ ಒಣಗಿರುತ್ತದೆ. ಅಲ್ಲದೇ ಬೇಸಿಗೆ ಸಮಯವಾದ್ದರಿಂದ ಕಾಡಿಗೆ ಬೆಂಕಿ ಬೀಳುವ ಎಲ್ಲಾ ಮುನ್ಸೂಚನೆಗಳಿರುತ್ತವೆ. ಆದರೂ ಅರಣ್ಯ ಇಲಾಖೆಯು ಕಾಡ್ಗಿಚ್ಚನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications