ಮಹಾ ಶಿವರಾತ್ರಿ 2023: ಶಿವರಾತ್ರಿಗೆ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರಿಗಳ ದಂಡು
ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆಯು ಫೆಬ್ರವರಿ 17ರಿಂದ ಐದು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಮಹಾಶಿವರಾತ್ರಿ ಜಾತ್ರೆಗೆ ಭಕ್ತರು ಸಾಗರೋಪಾದಿಯಲ್ಲಿ ಪಾದಯಾತ್ರೆ ಮೂಲಕ ಬರುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಚಾಮರಾಜನಗರ, ಫೆಬ್ರವರಿ 16: ಶಿವರಾತ್ರಿಯ ಮಹಾಜಾತ್ರೆಗೆ ಮಲೆಮಹದೇಶ್ವರ ಬೆಟ್ಟ ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದು, ಭಕ್ತರು ಈಗಾಗಲೇ ಮಲೆಮಹದೇಶ್ವರ ಬೆಟ್ಟದತ್ತ ಪಾದಯಾತ್ರೆ ಮೂಲಕ ತೆರಳುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರು ಹರಕೆ ಹೊತ್ತು ಕಾಲ್ನಡಿಗೆ ಮೂಲಕ ತೆರಳಿ ಹರಕೆ ತೀರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಮಹಾಶಿವರಾತ್ರಿ ಜಾತ್ರೆ ಅದ್ಧೂರಿಯಾಗಿ ನಡೆದಿರಲಿಲ್ಲ. ಆದರೆ ಈ ಬಾರಿ ಹಿಂದಿನಂತೆಯೇ ಜಾತ್ರೆ ನಡೆಯುತ್ತಿರುವುದರಿಂದ ಭಕ್ತರು ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆಯು ಫೆಬ್ರವರಿ 17ರಿಂದ ಐದು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಮಹಾಶಿವರಾತ್ರಿ ಜಾತ್ರೆಗೆ ಭಕ್ತರು ಸಾಗರೋಪಾದಿಯಲ್ಲಿ ಪಾದಯಾತ್ರೆ ಮೂಲಕ ಬರುತ್ತಿದ್ದಾರೆ. ಈ ಪೈಕಿ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಇವರೊಂದಿಗೆ ಬೆಂಗಳೂರು, ಕೋಲಾರ, ರಾಮನಗರ, ಕನಕಪುರ, ಮಂಡ್ಯ ಜಿಲ್ಲೆಯಿಂದಲೂ ಭಕ್ತರು ಬರುತ್ತಿದ್ದು, ಇವರೆಲ್ಲರೂ ಕಾವೇರಿ ವನ್ಯಧಾಮದ ಸಂಗಮ ವಲಯದ ಕಾವೇರಿ ನದಿ ದಾಟಿ ಹನೂರು ವನ್ಯಜೀವಿ ವಲಯದ ಬಸವನಕಡಕ್ಕೆ ಬರಬೇಕಾಗಿದೆ. ಕಾವೇರಿ ನದಿಯನ್ನು ಭಕ್ತರು ದಾಟಬೇಕಾಗಿರುವುದರಿಂದ ನೀರಿನ ಹರಿಯುವ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.

ಸಂಕಲ್ಪ ಈಡೇರಿಸಲು ಭಕ್ತರ ಪಾದಯಾತ್ರೆ
ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ವರ್ಷದ ಇತರೆ ದಿನಗಳಲ್ಲಿಯೂ ಭಕ್ತರು ಸಾಗುತ್ತಾರೆ. ಆದರೆ ಶಿವರಾತ್ರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸುತ್ತಾರೆ. ಸಂಕಲ್ಪ ಮಾಡಿಕೊಂಡವರು ಅದು ಈಡೇರಿದ ಹಿನ್ನಲೆಯಲ್ಲಿ ಹರಕೆ ತೀರಿಸುತ್ತಾರೆ. ಈ ಬಾರಿ ಚುನಾವಣೆ ಹಿನ್ನಲೆಯಲ್ಲಿ ಬಹಳಷ್ಟು ಮಂದಿ ತಮ್ಮ ನಾಯಕರ ಗೆಲುವಿಗಾಗಿಯೂ ಸಂಕಲ್ಪ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮಲೆಮಹದೇಶ್ವರ ಬೆಟ್ಟದತ್ತ ತೆರಳುವ ಭಕ್ತರು ಅಲ್ಲಲ್ಲಿ ಕಾಣಿಸುತ್ತಿದ್ದು ಎಲ್ಲರೂ ಕಾವೇರಿ ವನ್ಯಧಾಮದ ಸಂಗಮ ವಲಯದ ಮೂಲಕ ಕಾವೇರಿ ನದಿ ದಾಟಿ ಹನೂರು ವನ್ಯಜೀವಿ ವಲಯದ ಬಸವನಕಡಕ್ಕೆ ತೆರಳುತ್ತಿರುವ ದೃಶ್ಯ ಕಾಣಿಸುತ್ತಿದ್ದು, ಹೀಗೆ ಬರುವ ಭಕ್ತರ ಪೈಕಿ ಕೆಲವು ಭಕ್ತರು ತಮ್ಮ ಪಾದಯಾತ್ರೆ ಮುಂದುವರೆಸಿದರೆ ಇನ್ನು ಕೆಲವರು ನದಿ ತೀರದಲ್ಲಿ ವಿಶ್ರಾಂತಿ ಪಡೆದು ಬಳಿಕ ತಮ್ಮ ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ.
ಪಾದಯಾತ್ರಿಗಳಿಗೆ ಊಟದ ವ್ಯವಸ್ಥೆ
ದೂರದಿಂದ ಬರುವ ಪಾದಯಾತ್ರಿಗಳಿಗೆ ಅಲ್ಲಲ್ಲಿ ಊಟದ ವ್ಯವಸ್ಥೆಯಲ್ಲಿ ಊರಿನ ದಾನಿಗಳು ಮಾಡುತ್ತಿದ್ದು, ಈ ಕುರಿತಂತೆ ಭಕ್ತರ ಪೈಕಿ ಬನ್ನೇರುಘಟ್ಟದಿಂದ ಬಂದಿದ್ದ ದೇವಮ್ಮ ಮಾತನಾಡಿ "ಎಂಟು ವರ್ಷಗಳಿಂದ ಬರಿಗಾಲಿನಲ್ಲಿ ಮಾದಪ್ಪನ ಬೆಟ್ಟಕ್ಕೆ ನಡೆದುಕೊಂಡೇ ಹೋಗುತ್ತಿದ್ದೇನೆ. ಇದರಿಂದ ನನ್ನ ಕಷ್ಟಗಳೆಲ್ಲವೂ ಪರಿಹಾರವಾಗಿದೆ. ಶಕ್ತಿ ಇರುರುವವರೆಗೂ ಕಾಲ್ನಡಿಗೆಯಲ್ಲೇ ಬೆಟ್ಟಕ್ಕೆ ಹೋಗುತ್ತೇನೆ. ಮೊದಲೆಲ್ಲ ಮನೆಯಲ್ಲೇ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದೆವು. ಆದರೆ ಈಗ ಅಲ್ಲಲ್ಲಿ ದಾನಿಗಳು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಈಗ ಕಾಲ್ನಡಿಗೆಯಲ್ಲಿ ಹೆಚ್ಚು ಜನರು ಬರುತ್ತಿರುವುದು ಸಂತಸದ ವಿಚಾರ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪಾದಯಾತ್ರಿಗಳಿಗೆ ಸಂಘ ಸಂಸ್ಥೆಗಳು, ದಾನಿಗಳು ಅಲ್ಲಲ್ಲಿ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದು, ಶಾಗ್ಯ ಕಳ್ಳಿದೊಡ್ಡಿ ಗ್ರಾಮದಲ್ಲಿ ಮೂರು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ರಾಮನಗರ ಜಿಲ್ಲೆಯ ದಾನಿಗಳು ಅರಣ್ಯದಿಂದ ಹೊರಗೆ ಶಾಮಿಯಾನ ಹಾಕಿ ಅಡುಗೆ ಸಿದ್ಧಪಡಿಸಿ ಭಕ್ತರ ಹಸಿವೆಯನ್ನು ನೀಗಿಸಿದ್ದು ಕಂಡು ಬಂದಿದೆ.
ಅರಣ್ಯ ಇಲಾಖೆಯಿಂದ ಎಚ್ಚರಿಕೆ ಸಂದೇಶ
ಇನ್ನು ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸಮಸ್ಯೆಗಳು ಎದುರಾಗುತ್ತಿದ್ದು ಕಳೆದ ವರ್ಷ ಭಕ್ತರು ಪ್ಲಾಸಿಕ್ ಬಾಟಲಿ ಹಾಗೂ ಊಟದ ತಟ್ಟೆಗಳನ್ನು ನದಿ ತೀರ ಹಾಗೂ ಅರಣ್ಯದೊಳಗೆ ಎಲ್ಲೆಂದರಲ್ಲಿ ಬಿಸಾಡಿದ್ದರು. ಇದರಿಂದ ಪರಿಸರದ ಮೇಲೆ ತೊಂದರೆಯಾಗುತ್ತಿದ್ದು, ಈ ಬಾರಿ ಇದನ್ನು ತಪ್ಪಿಸುವುದಕ್ಕಾಗಿ ಅರಣ್ಯ ಇಲಾಖೆ ನದಿ ತೀರ ಹಾಗೂ ದಾರಿಯುದ್ದಕ್ಕೂ ಅಲ್ಲಲ್ಲಿ ಕಸ ಹಾಕಲು ಜಾಗವನ್ನು ಗುರುತಿಸಿ ತಾತ್ಕಾಲಿಕ ಕಸದ ಬುಟ್ಟಿಗಳನ್ನು ಇರಿಸಿದೆ. ಭಕ್ತರು ಇದನ್ನು ಗಮನಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ.
ಅರಣ್ಯ ಅಧಿಕಾರಿಗಳು ಭಕ್ತರಿಗೆ ಎಚ್ಚರಿಕೆಯ ಸೂಚನೆ ನೀಡಿದ್ದು, ನದಿ ದಾಟಿ ಬರುವ ಭಕ್ತರು ಅರಣ್ಯ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಸಂಜೆ 6 ಗಂಟೆ ಬಳಿಕ ಪಾದಯಾತ್ರೆ ಮುಂದುವರಿಸದಂತೆ ಮನವಿ ಮಾಡಿದ್ದಾರೆ.












Click it and Unblock the Notifications