ಗುಂಡ್ಲುಪೇಟೆ: ಕಬ್ಬಿನ ಗದ್ದೆಯಲ್ಲಿ ಬಾಲ ಬಿಚ್ಚಿದ ಚಿರತೆ-ಮುಂದೇನಾಯ್ತು ಗೊತ್ತಾ?
ಚಾಮರಾಜನಗರ, ಮೇ, 27: ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿಬಿಟ್ಟಿದೆ. ಹಾಗೆಯೇ ಇದೀಗ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಚಿರತೆಯೊಂದು ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಕಾಲ್ಕಿತ್ತಿರುವ ಘಟನೆ ತಾಲೂಕಿನ ಪರಮಾಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಪರಮಾಪುರ ಗ್ರಾಮದ ಶಂಭುಲಿಂಗಪ್ಪ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಹೊರ ಬಂದಿದೆ. ಇದನ್ನು ಕಂಡ ಮಾಲೀಕರು ಹಾಗು ಕೆಲಸಗಾರರು ಗಾಬರಿಗೊಂಡು ಕಬ್ಬು ಕಟಾವು ನಿಲ್ಲಿಸಿ ಜಮೀನಿನಿಂದ ಹೊರ ಬಂದಿದ್ದಾರೆ.

ಮಾಹಿತಿಯನ್ನು ಮಾಲೀಕರು ಅರಣ್ಯಾಧಿಕಾರಿಗಳಿಗೆ ತಿಳಿಸಿದ ಮೇರೆಗೆ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ಶಂಭುಲಿಂಗಪ್ಪ ಜಮೀನಿಗೆ ಬೋನ್ ತಂದಿರಿಸಿದ್ದಾರೆ. ಜೊತೆಗೆ ಸುತ್ತಮುತ್ತಲ ಪ್ರದೇಶದಲ್ಲು ಕೂಂಬಿಂಗ್ ನಡೆಸಿದ್ದು, ಚಿರತೆ ಸುಳಿವು ಪತ್ತೆಯಾಗಿಲ್ಲ.
ಚಿರತೆ ಸೆರೆಗೆ ಒತ್ತಾಯ: ಪರಮಾಪುರ ಭಾಗದಲ್ಲಿ ಚಿರತೆ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಕಬ್ಬಿನ ಗದ್ದೆಯಿಂದ ಓಡಿ ಹೋಗಿದೆ. ಇದರಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಶೀಘ್ರದಲ್ಲಿ ಚಿರತೆ ಸೆರೆಗೆ ಮುಂದಾಗಬೇಕು ಎಂದು ರೈತ ಮಹದೇವಪ್ಪ ಒತ್ತಾಯಿಸಿದ್ದಾರೆ.
ಪರಿವಾಳ ಎಳೆದೊಯ್ದ ಮೊಸಳೆ: ಕೊಳ್ಳೇಗಾಲ ತಾಲೂಕಿನ ಯಡಕೂರಿಯ ಗ್ರಾಮದ ಸಮೀಪವಿರುವ ಕಾವೇರಿ ನದಿ ತಟದಲ್ಲಿ ಪರಿವಾಳವನ್ನು ಮೊಸಳೆಯೊಂದು ಹಿಡಿದು ನೀರೊಳಗೆ ಎಳೆದೊಯ್ದಿರುವ ಘಟನೆ ನಡೆದಿದೆ.
ಗ್ರಾಮ ಸಂಪರ್ಕಿಸಲು ನಿರ್ಮಿಸಿರುವ ಸೇತುವೆ ಸಮೀಪದ ನದಿ ತಟದಲ್ಲಿ ಮೊಸಳೆ ಪರಿವಾಳವನ್ನು ಹಿಡಿದು ಎಳೆದೊಯ್ದ ಘಟನೆ ನಡೆದಿದೆ. ಈ ದೃಶ್ಯವನ್ನು ಗ್ರಾಮದ ಯುವಕ ಅರುಣ್ ಎಂಬಾತ ಸೆರೆ ಹಿಡಿದಿದ್ದು, ಭಾರೀ ವೈರಲ್ ಆಗುತ್ತಿದೆ.
ಅರುಣ್ ನದಿ ತಟದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಾಲಯ ಸಮೀಪದ ಜಗಳಿಕಟ್ಟೆಯಲ್ಲಿ ಕುಳಿತ್ತಿದ್ದರು. ಈ ವೇಳೆ ಮೊಸಳೆಯೊಂದು ನದಿಯ ದಡದಲ್ಲಿದ್ದ ಕೊಕ್ಕರೆಯನ್ನು ಹಿಡಿಯಲು ದಡ್ಡಕ್ಕೆ ಶರವೇಗದಲ್ಲಿ ಬಂದಿದ್ದನ್ನು ಗಮನಿಸಿದ್ದಾರೆ. ಕೊಕ್ಕರೆ ಮೊಸಳೆ ದಾಳಿಗೆ ಸಿಗದೆ ಹಾರಿ ಹೋಗಿದೆ. ಇದನ್ನು ಕಂಡ ಅರುಣ್ ಮತ್ತೆ ಮೊಸಳೆ ಆಹಾರಕ್ಕೆ ಹೊರ ಬರುವುದೆಂದು ಕಾದು ಕುಳಿತ್ತಿದ್ದಾಗ ಎರಡ್ಮೂರು ಪಾರಿವಾಳಗಳು ನೀರನ್ನು ಕುಡಿಯುತ್ತಾ ನದಿ ತಟದಲ್ಲಿ ಆಟ ಆಡುತ್ತಿದ್ದವು.
ಆಗ ಇದನ್ನು ಕಂಡ ಮೊಸಳೆ ನೀರಿನಿಂದ ಹೊರ ಬರುವುದನ್ನು ಅರುಣ್ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನೋಡು ನೋಡುತ್ತಿದಂತೆ 1 ಪಾರಿವಾಳವನ್ನು ಮೊಸಳೆ ಎಳೆದೊಯ್ದಿದೆ.
ಗ್ರಾಮಸ್ಥರಲ್ಲಿ ಆತಂಕ: ಇದು ಗ್ರಾಮದ ಜನರು ತಮ್ಮ ದನ, ಕರುಗಳನ್ನು ತೊಳೆಯುವ ಸ್ಥಳವಾಗಿದೆ. ಆರೆ ಇದೀಗ ಮೊಸಳೆ ಪ್ರತ್ಯಕ್ಷವಾಗಿ ಪಾರಿವಾಳವನ್ನು ಎಳೆದೊಯ್ದಿರುವುದನ್ನು ಕಣ್ಣಾರೆ ಕಂಡ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ನಮ್ಮ ಗ್ರಾಮದ ಸುತ್ತಲಲ್ಲಿರುವ ನದಿಯಲ್ಲಿ ಐದಾರು ಮೊಸಳೆಗಳನ್ನು ನಾವು ಕಂಡಿದ್ದೇವೆ. ಇದುವರೆಗೂ ಅವು ಯಾರಿಗೂ ತೊಂದರೆ ಮಾಡಿಲ್ಲ. ಆದರೆ, ಇದೇ ಮೊದಲ ಬಾರಿ ದಡದಲ್ಲಿದ್ದ ಪರಿವಾಳವನ್ನು ಕಣ್ಣೆದುರೆ ಎಳೆದೊಯ್ದಿರುವುದು ಆತಂಕ ಮೂಡಿಸಿದೆ. ಮಕ್ಕಳು ಈ ಸ್ಥಳದಲ್ಲಿಯೇ ಈಜುವುದು, ಸ್ನಾನ ಮಾಡುವುದನ್ನು ಮಾಡುತ್ತಾರೆ. ರೈತರು ದನ, ಕರುಗಳನ್ನು ತೊಳೆಯುತ್ತೇವೆ ಎಂದು ಅರುಣ್ ಆತಂಕ ಹೊರಹಾಕಿದ್ದಾರೆ.












Click it and Unblock the Notifications