ಮಹಿಳಾ ಅಧಿಕಾರಿಗಳು ಸೀರೆ ಉಟ್ಟು ಬನ್ನಿ, ಪುರುಷರು ಫಾರ್ಮಲ್ಸ್ ಧರಿಸಿ: ಕೊಳ್ಳೇಗಾಲ ಶಾಸಕ ಹೀಗೆ ಹೇಳಿದ್ಯಾಕೆ?
ಚಾಮರಾಜನಗರ, ನವೆಂಬರ್, 30: ಚಾಮರಾಜನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದಿದೆ. ಈ ವೇಳೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ವಸ್ತಸಂಹಿತೆ ಬೋಧಿಸಿದ ಘಟನೆ ನಡೆಯಿತು.
ಪರಿಶಿಷ್ಟ ಪಂಗಡ ಇಲಾಖೆ ಉಪನಿರ್ದೇಶಕರು ಗೌನ್ ಧರಿಸಿ ಬಂದಿದ್ದರಿಂದ ಶಿಷ್ಟಾಚಾರದ ಬಗ್ಗೆ ಶಾಸಕ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕು. ಕಾಲೇಜು ವಿದ್ಯಾರ್ಥಿಗಳಂತೆ ಇರಬಾರದು. ಮಹಿಳಾ ಅಧಿಕಾರಿಗಳು ಸೀರೆ ಉಟ್ಟು ಬನ್ನಿ, ಪುರಯಷರು ಜೀನ್ಸ್, ಟೀ ಶರ್ಟ್ ಬಿಟ್ಟು ಫಾರ್ಮಲ್ಸ್ ಧರಿಸಿ ಎಂದು ಸೂಚಿಸಿದರು.

ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ: ಚಾಮರಾಜನಗರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರಾದ ಮಹಾದೇವಪ್ಪ, ವೆಂಕಟೇಶ್ ಎದುರೇ ಶಾಸಕರ ನಡುವೆ ಮಾತಿನ ಚಕಮಕಿ ಉಂಟಾಯಿತು. ಸಭೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕುರಿತು ಪ್ರಶ್ನೆ ಮತ್ತು ಯೋಜನೆ ಬಗ್ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ ಕೇಳುವಾಗ ಶಾಸಕ ಪುಟ್ಟರಂಗಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ಎಷ್ಟು ಮಾತನಾಡುತ್ತೀರಿ, ಬೇರೆ ಇಬ್ಬರು ಶಾಸಕರು ಸುಮ್ಮನೆ ಕೂತಿದ್ದಾರೆಂದು ಆಕ್ಷೇಪ ಹೊರಹಾಕಿದರು. ಈ ಮಾತು ಕೇಳಿ ಕೆರಳಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ತಾನು ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ, ಕತೆ ಹೇಳುತ್ತಿಲ್ಲ. ನೀವು ಮಾತನಾಡಿ ಕೆಡಿಪಿ ಸಭೆಯಲ್ಲಿ ಮಾತಾನಾಡುವುದೇ ತಪ್ಪು ಎಂದರೆ ಹೇಗೆ ಎಂದು ಕೃಷ್ಣಮೂರ್ತಿ ಪ್ರಶ್ನಿಸಿದರು.
ಇನ್ನು ಶಾಸಕರ ನಡುವಿನ ಕಿತ್ತಾಟಕ್ಕೆ ಸಭೆ ಕೆಲಕ್ಷಣ ಗಪ್ ಚುಪ್ ಆಯಿತು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ನಂತರ ಸಭೆ ಮುಂದುವರೆಯಿತು.
ಸಚಿವ ಸ್ಥಾನ ಕೊಟ್ಟೇ ಕೊಡ್ತಾರೆ: ಸಚಿವ ಸಂಪುಟ ಸೇರಲು ಹಲವು ಶಾಸಕರು ಹಾತೊರೆಯುತ್ತಿದ್ದು, ಈಗ ಶಾಸಕ ಪುಟ್ಟರಂಗಶೆಟ್ಟಿ ಕೂಡ ತಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮನಸ್ಸಿನಲ್ಲಿ ನಾನು ಇದ್ದೇನೆ. ಸಚಿವ ಸ್ಥಾನ ಕೊಟ್ಟೆ ಕೊಡ್ತಾರೆ ಎಂದು ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದರು.
136 ಸೀಟು ಗೆದ್ದು ಸಂಪುಟ ರಚನೆ ವೇಳೆ ನನ್ನ ಹೆಸರಿತ್ತು. ನನಗೇ ಕಳೆದ ಬಾರಿಯೇ ಸಚಿವ ಸ್ಥಾನ ಕೊಡಬೇಕು ಅಂತಾ ತೀರ್ಮಾನ ಆಗಿತ್ತು. ಕಾರಣಾಂತರದಿಂದ ಸಚಿವ ಸ್ಥಾನ ತಪ್ಪಿತ್ತು ಎಂದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಒಂದು ವರ್ಷ ಉಪ ಸಭಾಪತಿ ಆಗಲೂ ಹೇಳಿದ್ದರು. ನಾನು ಉಪ ಸಭಾಪತಿ ಸ್ಥಾನ ನಿರಾಕರಿಸಿದ್ದೆ, ಒಂದು ವರ್ಷ ಕಾಲ ಸುಮ್ಮನಿರಲೂ ಹೇಳಿದ್ದರು. ಈ ಬಾರಿ ಸಂಪುಟ ಪುನರ್ ರಚನೆ ಆದರೆ ಸಚಿವ ಸ್ಥಾನ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾತಿವಾರು, ಜಿಲ್ಲಾವಾರು ನೋಡಿದರೂ ಕೂಡ ನನಗೆ ಸಚಿವ ಸ್ಥಾನ ಕೊಡಬೇಕು. ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸಿಎಂ ಎಲ್ಲರ ಮೇಲೆ ನಂಬಿಕೆಯಿದೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.












Click it and Unblock the Notifications