ಚಾಮರಾಜನಗರ: ಮನೆ ಇರೋದು ಬೆಂಗ್ಳೂರಲ್ಲಿ.. ಮತದಾನ ಮಾತ್ರ ಸ್ವಗ್ರಾಮದಲ್ಲಿ ಎಂದ ಕೆಂಡಸಂಪಿಗೆ ಹೀರೋ
ಚಾಮರಾಜನಗರ, ಏಪ್ರಿಲ್, 26: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಮತದಾರರು ಉತ್ಸಾಹದಿಂದ ಬರುತ್ತಿದ್ದು, ಬಿರುಸಿನ ಮತದಾನ ನಡೆಯುತ್ತಿದೆ. ರಣಭೀಕರನ ಬಿಸಿಲಿನ ನಡುವೆಯೇ ದೂರದ ಊರಿನಿಂದಲೂ ಸ್ವಗ್ರಾಮಕ್ಕೆ ಬಂದ ಯುವಕರು, ಹಿರಿಯ ನಾಗರಿಕರು ಮತದಾನ ಮಾಡುತ್ತಿದ್ದಾರೆ. ಹಾಗೆಯೇ ತಾಲೂಕಿನ ಮೂಡಲಪುರ ಗ್ರಾಮದಲ್ಲಿ ಕೆಂಡಸಂಪಿಗೆ ಹೀರೋ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಚಾಮರಾಜನಗರ ತಾಲೂಕಿನ ಸ್ವ ಗ್ರಾಮವಾದ ಮೂಡಲಪುರದಲ್ಲಿ ಸ್ಯಾಂಡಲ್‌ವುಡ್ ನಟ ವಿಕ್ಕಿ ವರುಣ್ ಮತದಾನ ಮಾಡಿದ್ದಾರೆ. ಮಧ್ಯರಾತ್ರಿ ಬೆಂಗಳೂರಿನಿಂದ ಬಂದು ಬೆಳಗ್ಗೆಯೇ ಕೆಂಡಸಂಪಿಗೆ ಹೀರೋ ಮತದಾನ ಮಾಡಿ ಮತದಾನದ ಮಹತ್ವ ಸಾರಿದ್ದಾರೆ. ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.

ದೇಶ ಅಭಿವೃದ್ಧಿ ಆಗಬೇಕೆಂದರೆ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ಮತದಾನ ಪ್ರತಿಯೊಬ್ಬರ ಜವಾಬ್ದಾರಿ, ದೇಶಕ್ಕಾಗಿ, ನಾಡಿಗಾಗಿ ನಮ್ಮ ಊರಿಗಾಗಿ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ನಾನು ಬೆಂಗಳೂರಿಗೆ ಶಿಫ್ಟ್ ಆಗಿದ್ದರೂ ಮತದಾನದ ಹಕ್ಕನ್ನು ಊರಲ್ಲೇ ಉಳಿಸಿಕೊಂಡಿದ್ದೇನೆ ಎಂದರು.
ತಮ್ಮನ ಜೊತೆ ನಂಜನಗೂಡು ಶಾಸಕ ಮತದಾನ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 9ರ ತನಕ ಶೇಕಡಾ 7ರಷ್ಟು ಮತದಾನವಾಗಿತ್ತು.
ಪ್ರಜಾಪ್ರಭುತ್ವದ ದೊಡ್ಡಹಬ್ಬವಾದ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಕೂಡ ಉತ್ಸಾಹದಿಂದ ಮತದಾನ ನಡೆಸಿದ್ದಾರೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕೊಳ್ಳೇಗಾಲದ ಶಂಕರಪುರ ಬಡಾವಣೆಯಲ್ಲಿ ಮತದಾನ ಮಾಡಿದರೇ, ಹನೂರು ಮಾಜಿ ಶಾಸಕ ಆರ್.ನರೇಂದ್ರ ದೊಡ್ಡಿಂದುವಾಡಿ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ.
ತಮ್ಮನ ಜೊತೆ ದರ್ಶನ್ ಮತದಾನ: ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ತಮ್ಮ ಧೀರನ್ ಧ್ರುವನಾರಾಯಣ ಜೊತೆ ಮತದಾನ ಮಾಡಿದರು.
2013ರಲ್ಲಿ ಮೊದಲ ಮತದಾನ ಮಾಡಿದ್ದ ದರ್ಶನ್ ಧ್ರುವನಾರಾಯಣ ಈಗ ಐದನೇ ಬಾರಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದ ಬಳಿಕ ಮಾಧ್ಯಮವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸಿದ್ದು, ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಬರಲಿದೆ, ಕಾಂಗ್ರೆಸ್ ಪರವಾದ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications