ಪ್ರಧಾನಿ ಮೋದಿ ಅವರು ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡ್ತಿರುವುದು ಸರಿನಾ?: ಎಚ್.ಡಿ.ಕೆ ಪ್ರಶ್ನೆ
ಚಾಮರಾಜನಗರ, ಮೇ, 06: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಜೆ.ಡಿ.ಎಸ್ ಅಭ್ಯರ್ಥಿಗಳ ಪರ ಹನೂರಿನಲ್ಲಿ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದರು. ಈ ವೇಳೆ ಬೆಂಗಳೂರಿನ ಮೋದಿ ರೋಡ್ ಶೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಅವರು ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡುತ್ತಿದ್ದಾರೆ. ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡುತ್ತಿದ್ದಾರೆ. ಇದರಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ ಎಂದು ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡುತ್ತಿದ್ದಾರೆ. ಇದರಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ.
— oneindiakannada (@OneindiaKannada) May 6, 2023
ಎಚ್.ಡಿ.ಕುಮಾರಸ್ವಾಮಿ#hdkumaraswamy #modiroadshow #karnatakaelections2023 #bengaluru pic.twitter.com/9GnY40M5eA
ಅಲ್ಲದೆ ನಾಳೆ ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಪ್ರಧಾನಿ ಅವರ ರೋಡ್ ಶೋ ಪರಿಣಾಮ ಬೀರುತ್ತದೆ. ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಾರೆ. ಹಾಗಿದರೆ ರೋಡ್ ಶೋ ಯಾಕೆ ಮಾಡುತ್ತೀರಾ? ಯಾರೋ ಕೆಲವರನ್ನು ತುಂಬಿಕೊಬಂದು ನಿಲ್ಲಿಸಿ ಮೋದಿ ಮೋದಿ ಎಂದು ಕೂಗಿಸಿಕೊಂಡು ಹೋಗುತ್ತಾರೆ. ಇದರಿಂದ ಜನರಿಗೆ ತೊಂದರೆಯೇ ಹೊರತು ಬಿಜೆಪಿಗೆ ಲಾಭ ಇಲ್ಲ ಎಂದರು.

ಇನ್ನು ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಬರುತ್ತಿರುವ ಸಮೀಕ್ಷೆಗಳು ಕೃತಕವಾಗಿವೆ. ರಾಷ್ಟ್ರೀಯ ಪಕ್ಷಗಳು ಹಣ ಕೊಟ್ಟು ಜನರ ಭಾವನೆಗಳನ್ನು ಕದಡುವ ಕೆಲಸವನ್ನು ಮಾಡುತ್ತಿವೆ. ಈ ಸಮೀಕ್ಷೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವು ರಾಷ್ಟ್ರೀಯ ಪಕ್ಷಗಳ ಹಣಕ್ಕೋಸ್ಕರ ಮಾಡಿರುವ ಸಮೀಕ್ಷೆಗಳಾಗಿವೆ. ಇವೆಲ್ಲ ಈ ಬಾರಿ ಉಲ್ಟಾ ಹೊಡೆಯುತ್ತವೆ. ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ. ಹಾಗೆಯೇ ಸಮೀಕ್ಷೆಗಳಲ್ಲಿ ಜೆಡಿಎಸ್‌ಗೆ ಕಡಿಮೆ ಸ್ಥಾನ ಕೊಟ್ಟಿರುವವರು ಆನಂದಪಡಲಿ.
ಇನ್ನು ಸಿದ್ದರಾಮಯ್ಯನವರಿಗೆ ಯಾವ ಸಿದ್ಧಾಂತವಿದೆ. ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಅನ್ನೇ ಮುಗಿಸಿ ಎನ್ನುತ್ತಾರೆ.ಹೃದಯದಲ್ಲಿರುವುದನ್ನು ಅವರು ಹೇಳುತ್ತಾರೆ. ಆಮೇಲೆ ಇಲ್ಲ.. ಇಲ್ಲ.. ಬಿಜೆಪಿ ಮುಗಿಸಿ ಅಂತಾರೆ. ಇದು ಅವರ ಸಿದ್ಧಾಂತವಾಗಿದೆ. ನಾವು ಅವರಿಂದ ಸಿದ್ಧಾಂತವನ್ನು ಕಲಿಯಬೇಕಾಗಿಲ್ಲ ಎಂದರು.
ಅಧಿಕಾರದಲ್ಲಿದ್ದಾಗ ಲಿಂಗಾಯತರ ಬಗ್ಗೆ ಮಾತನಾಡಿ ಈಗ ಲಿಂಗಾಯತರೇ ಕ್ಷಮಿಸಿ ಎಂದು ಹೇಳುತ್ತಿದ್ದಾರೆ. ಇವರು ಜಾತ್ಯಾತೀತವಾದೀನಾ? ಪ್ರತಿ ಸಮಾಜಕ್ಕೆ ದೇವೇಗೌಡರು ಕೊಟ್ಟ ರಾಜಕೀಯ ಶಕ್ತಿಯನ್ನು ಇವರ ಕೈಯಲ್ಲಿ ಕೊಡುವುದಕ್ಕೆ ಆಗುತ್ತದೆಯಾ? ಎಲ್ಲರಿಗಿಂತ ಹೆಚ್ಚಿನ ಹೊಂದಾಣಿಕೆ ರಾಜಕಾರಣ ಸಿದ್ದರಾಮಯ್ಯ ಅವರದ್ದು. ಮೊನ್ನೆ ನಾಗಮಂಗಲದಲ್ಲಿ ಭಾಷಣ ಮಾಡಿ ಪಶ್ಚಾತ್ತಾಪ ಪಡಲಿಲ್ಲವಾ. ಯಾರನ್ನೋ ಗೆಲ್ಲಿಸಿ ತಪ್ಪು ಮಾಡಿದ್ದೀವಿ ಅಂತಾ ಹೇಳಿಲ್ವಾ, ಅದಕ್ಕಿಂತ ಸಾಕ್ಷಿ ಬೇಕಾ? ಎಂದರು.
ಹಾಗೆಯೆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಂ.ಆರ್.ಮಂಜುನಾಥ್ ಪರ ಎಚ್.ಡಿ.ಕುಮಾರಸ್ವಾಮಿ ಅವರು ಮತಬೇಟೆ ಮಾಡಿದರು. ಈ ಮೂಲಕ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಮಂಜುನಾಥ್‌ಗೆ ಬೂಸ್ಟರ್ ಡೋಸ್ ನೀಡಿದರು.












Click it and Unblock the Notifications