ಚಾಮರಾಜನಗರದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಕುರಿತು ಮಾಹಿತಿ
ಚಾಮರಾಜನಗರ, ಅಕ್ಟೋಬರ್ 31: ಚಾಮರಾಜನಗರದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ಮಾಹಿತಿ ನೀಡಿದ್ದಾರೆ.
ಚಾಮರಾಜನಗರದ ಬೇರಂಬಾಡಿ ಗ್ರಾಮದ ಬಳಿ ಸ್ಯಾಟಲೈಟ್ ಫೋನ್ ಪತ್ತೆಯಾಗಿರುವುದು ಖಾತ್ರಿಯಾಗಿದೆ.
ಬಂಡೀಪುರ ಅರಣ್ಯದಲ್ಲಿ ಸತತ ಎರಡು ದಿನಗಳಿಂದ ನಕ್ಸಲ್ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ಎಎನ್ಎಫ್ ಜತೆ 10 ಮಂದಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ.

ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಗೊತ್ತಾಗುತ್ತಿದ್ದಂತೆ ಚಾಮರಾಜನಗರ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೆ ಕಳೆದ ಮೂರು ದಿನಗಳ ಹಿಂದೆ ಕೇರಳದಲ್ಲಿ ನಾಲ್ವರು ನಕ್ಸಲರನ್ನು ಎನ್ಕೌಂಟರ್ ಮೂಲಕ ಹೊಡೆದುರುಳಿಸಲಾಗಿದ್ದು, ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಕ್ಸಲರು ದಾಳಿ ನಡೆಸಬಹುದೆಂಬ ಶಂಕೆಯಿಂದ ಗಡಿಭಾಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್ಪಿ ಆನಂದಕುಮಾರ್ ಕೂಡ ಪಾಲ್ಗೊಂಡಿದ್ದಾರೆ. ಇದಲ್ಲದೆ, ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೂ ಯಾವುದೇ ರೀತಿಯ ನಕ್ಸಲ್ ಚಟುವಟಿಕೆ ಕಂಡು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.












Click it and Unblock the Notifications