ಗುಂಡ್ಲುಪೇಟೆಯ 27 ಮಂದಿ ಪೌರ ಕಾರ್ಮಿಕರಿಗೆ ನಿವೇಶನ ಭಾಗ್ಯ
ಚಾಮರಾಜನಗರ, ಜೂನ್, 27: ಗುಂಡ್ಲುಪೇಟೆ ಪಟ್ಟಣ ವ್ಯಾಪ್ತಿಯ 27 ಮಂದಿ ಖಾಯಂ ಪೌರ ಕಾರ್ಮಿಕರಿಗೆ ಲಾಟರಿ ಎತ್ತುವ ಮೂಲಕ ನಿವೇಶನಗಳ ಹಕ್ಕು ಪತ್ರವನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹಂಚಿಕೆ ಮಾಡಿದರು.
ಪುರಸಭೆ ಸಭಾ ಭವನದಲ್ಲಿ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಹಾಲಿ ಇರುವ 40 ಖಾಯಂ ಪೌರ ಕಾರ್ಮಿಕರ ಪೈಕಿ 27 ಮಂದಿಗೆ ಪಿಕೆಜಿಬಿ ಯೋಜನೆಯಡಿ, 21ನೇ ವಾರ್ಡ್‌ನ ಹುಣಸೇತೋಪು ಬಡಾವಣೆಯ ಹೊಸೂರು ರಸ್ತೆಯಲ್ಲಿ 20/30 ಅಳತೆಯಲ್ಲಿ ಗುರುತಿಸಲಾದ ನಿವೇಶನಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಪೌರ ಕಾರ್ಮಿಕರು ಕೇವಲ ಸ್ವಚ್ಛತೆ ಮಾಡಲು ಮಾತ್ರ ಸೀಮಿತವಲ್ಲ ಎಂಬುದನ್ನು ಅರಿತುಕೊಳ್ಳಬೇಕು. 27 ಮಂದಿ ಖಾಯಂ ಪೌರಕಾರ್ಮಿಕರಿಗೆ ಪುರಸಭೆಯಿಂದ ಹಂಚಿಕೆ ಮಾಡಿರುವ ನಿವೇಶನಗಳನ್ನು ಉಪಯೋಗಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಿ. ಮನೆ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಬಳಕೆ ಮಾಡುವ ವಸ್ತುಗಳು ಸಹ ಹೆಚ್ಚಾಗಿದೆ. ಆದ್ದರಿಂದ ಪಟ್ಟಣ ಸುಂದರವಾಗಲು ಇನ್ನೂ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪಟ್ಟಣದ ಅಭಿವೃದ್ಧಿಗೆ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಪೌರ ಕಾರ್ಮಿಕರು ನೆನೆಪು ಮಾಡಿಕೊಳ್ಳುತ್ತಿರುವುದು ಖುಷಿಯ ಸಂಗತಿ. ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಜೊತೆಗೆ ಮುಂದಿನ ದಿನಗಳಲ್ಲಿ ನಿಮಗೆ ಸಹಕಾರ ನೀಡಲು ಸಿದ್ದನಿದ್ದೇನೆ ಎಂದು ಅಭಯ ನೀಡಿದರು.
ಈ ವೇಳೆ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ರಮೇಶ್ ಬಾಬು ಇತರರು ಹಾಜರಿದ್ದರು.
ಕಷ್ಟಕ್ಕೆ ನೆರವಾದ ಯೋಜನೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಕುಟುಂಬಕ್ಕೆ ನೆರವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಳನಹುಂಡಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಕಾಳನಹುಂಡಿ ಗ್ರಾಮದ ಮಣಿಕಂಠ(23) ಎಂಬ ಯುವಕ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಬೇಗೂರು ಶಾಖೆಯಲ್ಲಿ 20 ರೂಪಾಯಿ ಹಣ ಪಾವತಿಸಿ ಪಿಎಂ ಸುರಕ್ಷಾ ಯೋಜನೆ ವಿಮೆ ಪಡೆದಿದ್ದರು. ಅದಾದ ಎರಡೇ ತಿಂಗಳಲ್ಲಿ ನಂಜನಗೂಡು ತಾಲೂಕಿನ ಎಲಚಗೆರೆ ಗೇಟ್‌ನಲ್ಲಿ ಬೈಕ್-ಕಾರು ಅಫಘಾತದಲ್ಲಿ ಮಣಿಕಂಠ ತೀವ್ರವಾಗಿ ಗಾಯಗೊಂಡು ಬಳಿಕ ಅಸುನೀಗಿದ್ದರು.
ಮೃತಪಟ್ಟ ವಿಚಾರ ತಿಳಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಎಲ್ಲಾ ದಾಖಲೆ ಪ್ರಕ್ರಿಯೆ ಮುಗಿಸಿ ವಿಮೆಯ ನಾಮಿನಿಯಾಗಿದ್ದ ಮಣಿಕಂಠ ತಾಯಿ ಮಹಾದೇವಮ್ಮ ಅವರಿಗೆ 2,00,000 ರೂಪಾಯಿ ಪರಿಹಾರದ ಮೊತ್ತವನ್ನು ಶುಕ್ರವಾರ (ಜೂನ್ 07) ವಿತರಿಸಿದ್ದಾರೆ.
ಅಂದಹಾಗೆ, ಕೇವಲ 20 ರೂಪಾಯಿ ಪಾವತಿಸಿ ವಿಮೆ ಪಡೆದಿದ್ದು, ಈಗ ಕುಟುಂಬಕ್ಕೆ ನೆರವಾದಂತಾಗಿದ್ದು, ಕುಟುಂಬಕ್ಕೆ ಪಿಎಂ ಸುರಕ್ಷಾ ಭೀಮಾ ಯೋಜನೆ ನೆರವಾಗಿದೆ.












Click it and Unblock the Notifications