ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಅವಾಂತರ, ಹಾನಿ ವಿವರ ಇಲ್ಲಿದೆ
ಚಾಮರಾಜನಗರ, ಮೇ, 31: ಈಗಾಗಲೇ ಸುರಿದ ಮುಂಗಾರು ಪೂರ್ವ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಹಾಗೆಯೆ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆಗೆ ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ. ಇನ್ನು ಹಾನಿಗೊಳಗಾದ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅದೇ ರೀತಿ ನಿನ್ನೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆರಾಯ ಅನಾಹುತಗಳನ್ನು ಸೃಷ್ಟಿಸಿದ್ದಾನೆ. ಹಾಗಾದರೆ ಎಲ್ಲೆಲ್ಲಿ ಎಷ್ಟು ಹಾನಿಯಾಗಿದೆ ಅನ್ನುವ ವಿವರನ್ನು ಇಲ್ಲಿ ಗಮನಿಸಿ.
ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಕೊನೆ ಹಂತದಲ್ಲಿ ಚುರುಕಾಗಿದ್ದು, ಮಂಗಳವಾರ (ಮೇ 31) ಸಂಜೆ ಚಾಮರಾಜನಗರ ಹಾಗೂ ಜಿಲ್ಲೆಯ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಚಾಮರಾಜನಗರದ ಜೋಡಿ ರಸ್ತೆಯಲ್ಲಿ 3-4 ಅಡಿ ನೀರು ನಿಂತಿದ್ದರಿಂದ ಒಂದೂವರೆ ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಮಳೆ ನಿಂತ ಬಳಿಕವೂ ವಾಹನ ಸವಾರರು ಕೆರೆಯಂತಾಗಿದ್ದ ನೀರಿನಲ್ಲಿ ಸಿಲುಕಿ ಹಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದ ಘಟನೆಯೂ ನಡೆಯಿತು. ರಸ್ತೆಯ ಒಂದು ಭಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾದರೇ, ಹಲವು ಅಂಗಡಿಗಳಿಗೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿ ಆಗಿದೆ. ಹಾಗೆಯೆ ಚಾಮರಾಜನಗರ ಜಿಲ್ಲೆಯಲ್ಲಿ ಇನ್ನೂ ಮುಂದಿನ 3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಲಿದೆ. ಇದಕ್ಕೂ ಮುನ್ನವೇ ಈಗಾಗಲೇ ಸುರಿದ ಮುಂಗಾರು ಪೂರ್ವ ಮಳೆ ರಾಜ್ಯದ ಹಲವೆಡೆ ಅವಾಂತರಗಳನ್ನೇ ಸೃಷ್ಟಿಸಿದೆ. ಭಾರೀ ಮಳೆಯಿಂದ ಕೆಲವರು ಮನೆ, ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದರೆ, ಮತ್ತೊಂದೆಡೆ ಕೃಷಿ ಭೂಮಿಗಳನ್ನು ಕಳೆದುಕೊಂಡ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗೆಯೆ ಇಂದು ಕೂಡ ಈ ಭಾಗಗಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಸಿದೆ. ಕೆಲವೆಡೆ ರಸ್ತೆಗಳನ್ನು ಕೆರೆಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡಿದರೆ, ಮತ್ತೊಂದೆಡೆ ಅಂಡರ್‌ಪಾಸ್‌ಗಳಲ್ಲಿ ಹೋಗದಂತೆ ಪೊಲೀಸರು ವಾಹನಗಳನ್ನು ತಡೆದು ಮುಂಜಾಗ್ರತೆ ಮೂಡಿಸಿದ ಘಟನೆಗಳು ಕೂಡ ನಡೆದವು.
ಹೀಗೆ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಆರ್ಭಟಸಿದೆ. ಹಾಗೆಯೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇನ್ನು ಬೆಂಗಳೂರು, ಚಿಕ್ಕಮಗಳೂರು, ಉಡುಪಿ, ರಾಮನಗರ, ಕೊಡಗು, ಚಾಮರಾಜನಗರ, ಹಾಸನ, ಶಿವಮೊಗ್ಗ, ಬೆಳಗಾವಿ ಕಲಬುರಗಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮತ್ತು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ 80ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಹಳ್ಳಿಯ ಅಮೂಲ್ ಜಯಸಿಂಗ್ ಕಾನಡೆ (24), ದೇಸಾರಹಟ್ಟಿ ಗ್ರಾಮದ ವಿಠ್ಠಬಾಯಿ ಮಹದೇವ ಕಾಮಕರ್ (50), ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ರೇವೂರ (ಬಿ) ಗ್ರಾಮದಲ್ಲಿ ರೈತ ಮಾಳಪ್ಪ ದತ್ತಪ್ಪ ಪೂಜಾರಿ (32) ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ, ಕಲಬುರಗಿ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಮನೆಗಳ ಮೇಲ್ಚಾಚಾವಣಿಗಳು ಗಾಳಿ ಮಳೆಗೆ ತೂರಿಕೊಂಡು ಹೋದ ಘಟನೆಯೂ ನಡೆದಿದೆ. ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುರಿದ ಅಬ್ಬರದ ಮಳೆಯಿಂದ ರಸ್ತೆಗಳಲ್ಲ ಕೆರೆಯಂತಾಗಿದೆ ವಾಹನ ಸವಾರರು ಪರದಾಡಿದರು.
ಅಲ್ಲದೆ ಮುಂದಿನ 48 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications