ಮಲೆ ಮಹದೇಶ್ವರ ಬೆಟ್ಟದ ಬಳಿ ಗುಜರಾತ್ ಪ್ರವಾಸಿಗರ ಬಸ್ ಪಲ್ಟಿ: 15ಕ್ಕೂ ಹೆಚ್ಚು ಮಂದಿಗೆ ಗಾಯ
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಬಳಿ ಗುಜರಾತ್ ಪ್ರವಾಸಿಗರ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಆದ ಅನಾಹುತಗಳು ಹಾಗೂ ಇದು ಸಂಭವಿಸಿದ್ದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಾಮರಾಜನಗರ, ಜನವರಿ, 25: ಗುಜರಾತ್ ಪ್ರವಾಸಿಗರ ಬಸ್ಸೊಂದು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪ ಪಲ್ಟಿಯಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬುಧವಾರ (ಜನವರಿ 25) ನಡೆದಿದೆ.
ಗುಜರಾತ್ ಮೂಲದ ಸ್ಲೀಪರ್ ಕೋಚ್ ಬಸ್ ಇದಾಗಿದ್ದು, ತಮಿಳುನಾಡು ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ವೇಳೆ ಪಾಲಾರ್‌ನ ಎರಡನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಸ್ ಹಿಂದಕ್ಕೆ ಜಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಗಾಯಾಳುಗಳು ಮಲೆಮಹದೇಶ್ವರ ಬೆಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಒಂದು ತಿಂಗಳ ಭಾರತ ಪ್ರವಾಸಕ್ಕಾಗಿ ಗುಜರಾತ್‌ನಿಂದ ಬಂದಿದ್ದರು ಎಂದು ತಿಳಿದುಬಂದಿದೆ.
ರಾಘವಾಪುರದ ಸಮೀಪ ಅಪಘಾತ
ಇನ್ನು ಇತ್ತೀಚೆಗಷ್ಟೇ ಸರಕು ಸಾಗಾಣಿಕೆಯ ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಸಮೀಪ ನಡೆದಿತ್ತು. ವಿಜಯಪುರ ಜಿಲ್ಲೆಯ ಜೇವರ್ಗಿ ಗ್ರಾಮದ ದೊರೆಯಪ್ಪ, ಶಶಿ ಬಡಿಗೇರ, ಪ್ರಭು ಬಡಿಗೇರ ಹಾಗೂ ಬೈಕ್‌ನಲ್ಲಿ ಬರುತ್ತಿದ್ದ ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದ ಬಸಪ್ಪ ಅವರ ತಲೆ, ಕೈ, ಕಾಲಿಗೆ ತೀವ್ರ ತರ ಪೆಟ್ಟು ಬಿದ್ದಿತ್ತು. ಕಾರಿನಲ್ಲಿದ್ದ ವಿಜಯಪುರ ಮೂಲದ ಆರು ಜನ ಕೇರಳದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ. ಈ ಆರು ಮಂದಿಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದರು ಎಂದು ತಿಳಿದುಬಂದಿತ್ತು.

ಕಾರು & ಈಚರ್ ನಡುವೆ ಅಪಘಾತ
ಕಾರು ಹಾಗೂ ಈಚರ್ ಗೂಡ್ಸ್ ಟೆಂಪೋ ಎದುರು ಬದುರು ರಾಘವಾಪುರ ಗ್ರಾಮದ ಗ್ರಾಮ ಪಂಚಾಯತಿ ಕಚೇರಿ ಮುಂದೆ ಬಂದಾಗ ಅಪಘಾತ ನಡೆದಿತ್ತು. ಇನ್ನು ಬೈಕ್ ಸವಾರ ಬಸಪ್ಪ ಮದ್ಯೆ ಸಿಲುಕಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗದಿಂದ ಬರುತ್ತಿದ್ದ ಕಾರು ಹಾಗೂ ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋದ ಮುಂದಿನ ಚಕ್ರಗಳು ಕಿತ್ತು ನೂರು ಮೀಟರ್‌ನಷ್ಟು ದೂರು ಕಳಚಿ ಬಿದ್ದಿದ್ದವು. ಜೊತೆಗೆ ಈಚರ್ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದ್ದು, ಕಾರು ಕೂಡ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆ ಸಂಬಂಧ ವಾಹನಗಳನ್ನು ವಶಕ್ಕೆ ಪಡೆದಿರುವ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.












Click it and Unblock the Notifications