ಗುಂಡ್ಲುಪೇಟೆ: ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ನಾಮಪತ್ರ ಸಲ್ಲಿಕೆ
ಚಾಮರಾಜನಗರ, ಏಪ್ರಿಲ್, 13: ಪಟ್ಟಣದ ತಾಲೂಕು ಕಚೇರಿ ಸಭಾಭವನದಲ್ಲಿ ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶಪ್ರಸಾದ್ ಅವರು (ಏಪ್ರಿಲ್ 13) ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಚುನಾವಣೆ ಅಧಿಕಾರಿ ಮಲ್ಲಿಕಾರ್ಜುನ್ ಅವರಿಗೆ ಗಣೇಶಪ್ರಸಾದ್ ಗುರುವಾರ ಮಧ್ಯಾಹ್ನ 1ಗಂಟೆ ಸಮಯದಲ್ಲಿ ಮೂರು ಸೆಟ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಮಾಜಿ ಸಂಸದ ಎ.ಸಿದ್ದರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು ಹಾಜರಿದ್ದರು.

ಪಾರ್ವತಿ ಬೆಟ್ಟದಲ್ಲಿ ವಿಶೇಷ ಪೂಜೆ
ಅಲ್ಲದೇ ಎಚ್.ಎಂ.ಗಣೇಶಪ್ರಸಾದ್ ಅವರು ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪದ ಪಾರ್ವತಿ ಬೆಟ್ಟದಲ್ಲಿ ಬೆಳಗ್ಗೆ ಕುಟುಂಬಸ್ಥರ ಜೊತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ನಂತರ ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಯಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಬೆಂಬಲಿಗರೊಂದಿಗೆ ಅದ್ದೂರಿಯಿಂದ ಮೆರವಣಿಗೆ ನಡೆಸಲಾಯಿತು.
ವಿ.ಸೋಮಣ್ಣ ಅವರನ್ನು ಕಟ್ಟಿಹಾಕಲು ಕೈ ಪ್ಲಾನ್
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ, ಬಿಜೆಪಿ ಬಿಡುಗಡೆ ಮಾಡಿದ ಮೊದಲನೇ ಪಟ್ಟಿಯಲ್ಲೇ ಸೋಮಣ್ಣ ಅವರಿಗೆ ಎರಡು ಕ್ಷೇತ್ರಗಳ ಹೊಣೆಯನ್ನು ಹೊರಿಸಲಾಗಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಪ್ರತಿಷ್ಟೆ ಪಣಕ್ಕಿಡಲು ತೆರಳುತ್ತಿರುವ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದು, ವರುಣಕ್ಕೆ ಹೆಚ್ಚು ತೆರಳದಂತೆ ಚಕ್ರವ್ಯೂಹ ಹೆಣೆಯುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆ ಮಾಡಲು ಬಿಜೆಪಿ ಸೋಮಣ್ಣಗೆ ಟಿಕೆಟ್ ಕೊಟ್ಟಿದೆ. ಆದರೆ, ವರುಣಗೆ ಸೋಮಣ್ಣ ಹೋಗಲಾರದೇ ಚಾಮರಾಜನಗರದಲ್ಲೇ ಕಟ್ಟಿಹಾಕಲು ಕಾಂಗ್ರೆಸ್ ಮುಂದಾಗಿದ್ದು, ಇದಕ್ಕೇ ಬಿಜೆಪಿ ಬಂಡಾಯವೇ ಬಂಡವಾಳವಾಗಿದೆ. ಸೋಮಣ್ಣಗೆ ಚಾಮರಾಜನಗರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಪೋಟವಾಗಿದೆ.
ಟಿಕೆಟ್ ವಂಚಿತ ನಾಗಶ್ರೀ ಪ್ರತಾಪ್ ಅವರ ಬೆಂಬಲಿಗರು ಈಗಾಗಲೇ ಕೆರಳಿ ಕೆಂಡವಾಗಿದ್ದು, ಸಾಲುಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ ಸೋಮಣ್ಣನವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಳಿಕೇಳಿ ಚಾಮರಾಜನಗರ ಹಾಗೂ ವರುಣದಲ್ಲಿ ಲಿಂಗಾಯತ ಪ್ರಾಬಲ್ಯ ಇದ್ದು, ಸೋಮಣ್ಣ ಅವರು ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಮಾತು ಆಡುತ್ತಾರೆ ಎಂಬ ರುದ್ರೇಶ್ ಆರೋಪ ಈಗಾಗಾಲೇ ಸಮುದಾಯದ ಜನರಲ್ಲಿ ಕಿಚ್ಚು ಹೊತ್ತಿಸಿದೆ.
ಇದು ಚುನಾವಣೆ ಹೊತ್ತಲ್ಲಿ ಅಂಡರ್ ಕರೆಂಟಾಗಿ ಕೆಲಸ ಮಾಡಲಿದೆ ಎಂಬುದು ಸೋಮಣ್ಣ ಹಾದಿಯಾಗಿ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದನ್ನು ಶಮನ ಮಾಡುವುದರಲ್ಲೇ ಸೋಮಣ್ಣ ಕಾಲ ಕಳೆಯಬೇಕಾಗುತ್ತದೆ. ವರುಣದತ್ತ ಗಮನ ಹರಿಸುವುದು ಅಸಾಧ್ಯವಾಗಲಿದೆ ಎಂದು ಕೈ ಪಡೆಯ ರಣತಂತ್ರವಾಗಿದೆ.
ವರುಣದಲ್ಲಿ ಸೋಮಣ್ಣನವರ ಗಮನ ಕಡಿಮೆಯಾದಷ್ಟು ಕಾಂಗ್ರೆಸ್‌ಗೆ ವರವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಆಧಾರದ ಮೇಲೆ ಚಾಮರಾಜನಗರದಲ್ಲಿನ ಬಂಡಾಯವನ್ನು ಹಾಗೇ ಉಳಿಸಲು ಕಾಂಗ್ರೆಸ್ ಈಗ ಮುಂದಾಗಿದೆ. ಚಾಮರಾಜನಗರದ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಅಸಮಾಧಾನ ಇದ್ದು, ಇವುಗಳನ್ನು ಪರಿಹರಿಸುವ ಜವಾಬ್ದಾರಿ ಸೋಮಣ್ಣನವರ ಮೇಲಿದೆ. ಬಂಡಾಯ ಶಮನ ಮಾಡುವುದೋ ಅಥವಾ ವರುಣದಲ್ಲಿ ಯುದ್ಧ ಮಾಡುವುದೋ ಎಂಬ ಸಂಧಿಗ್ಧತೆಗೆ ಸೋಮಣ್ಣರನ್ನು ದೂಡುವುದೇ ಕಾಂಗ್ರೆಸ್‌ನ ಸದ್ಯದ ತಂತ್ರವಾಗಿದೆ.
ಟಿಕೆಟ್ ಘೋಷಣೆಯಾದ ಬಳಿಕ ಮೈಸೂರಿನ ವರುಣ ಹಾಗೂ ಚಾಮರಾಜನಗರಕ್ಕೆ ಸೋಮಣ್ಣ ಬರುತ್ತಿದ್ದಾರೆ. ಜೊತೆಗೆ, ಚಾಮರಾಜನಗರದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಹೊಣೆಯನ್ನೂ ಹೊತ್ತಿದ್ದಾರೆ. ಕೊಳ್ಳೇಗಾಲದಲ್ಲಿ ಕಿನಕಹಳ್ಳಿ ರಾಚಯ್ಯ, ಗುಂಡ್ಲುಪೇಟೆಯಲ್ಲಿ ಎಂ.ಪಿ.ಸುನೀಲ್, ಹನೂರಲ್ಲಿ ಮೂವರು ಹಾಗೂ ಚಾಮರಾಜನಗರದಲ್ಲಿ ಪ್ರೊ. ಮಲ್ಲಿಕಾರ್ಜುನಪ್ಪ, ನಾಗಶ್ರೀ ಪ್ರತಾಪ್, ರುದ್ರೇಶ್ ಅಸಮಾಧಾನಗೊಂಡಿದ್ದಾರೆ. ಇದಕ್ಕೆಲ್ಲಾ ಸೋಮಣ್ಣನವರೇ ತೇಪೆ ಹಚ್ಚಬೇಕಿದೆ. ಜೊತೆಗೆ ಕಾಂಗ್ರೆಸ್‌ನ ಮಾಸ್ ಲೀಡರ್ ಜೊತೆಯೂ ಸ್ಪರ್ಧೆ ಮಾಡಬೇಕಿದೆ.












Click it and Unblock the Notifications