ಹೆಂಡ್ತಿಗೆ 2,000-ಗಂಡನ ತಲೆಗೆ ₹95,000 ಸಾಲದ ಹೊರೆ ಇಟ್ಟ ಸಿದ್ದರಾಮಯ್ಯ: ಹೀಗೇ ಹೇಳಿದ್ಯಾರು ಹಾಗೂ ಯಾಕೆ?
ಚಾಮರಾಜನಗರ, ಫೆಬ್ರವರಿ, 23: ಸಿದ್ದರಾಮಯ್ಯ ಸರ್ಕಾರ ಎಡವಟ್ಟಿನ, ಮೋಸಗಾರ ಸರ್ಕಾರ ಎಂದು ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಇನ್ನೂ ಏನೆಲ್ಲ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಮೂಲಕ ಸಿದ್ದಮ್ಮನಿಗೆ 2 ಸಾವಿರ ಹಣ ಕೊಟ್ಟು, ಗಂಡ ಸಿದ್ದಪ್ಪನ ತಲೆ ಮೇಲೆ 95,000 ರೂಪಾಯಿ ಸಾಲದ ಹೊರೆ ಇಟ್ಟಿದ್ದಾರೆ. ಈಗಾಗಲೇ ಸಿದ್ದರಾಮಯ್ಯ 96,000 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಅವರು ಆರೋಪ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.

ಪರಿಶಿಷ್ಠ ಜಾತಿ ಹಾಗೂ ಪಂಗಡಕ್ಕೆ 36,000 ಕೋಟಿ ರೂಪಾಯಿ ಅನುದಾನ ಕೊಟ್ಟು, ಅದರಲ್ಲಿ ಗ್ಯಾರಂಟಿ ಯೋಜನೆಗಾಗಿ 14,000 ಕೋಟಿ ರೂಪಾಯಿ ಬಳಸಿಕೊಂಡಿದ್ದಾರೆ. ಇದೊಂದು ಮಾರಕ ಕ್ರಮ, ಸಿದ್ದರಾಮಯ್ಯ ಸರ್ಕಾರ ದಲಿತ ವಿರೋಧಿ, ಮೋಸಗಾರ ಸರ್ಕಾರ ಎಂದು ದೂರಿದರು.
ಇನ್ನು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಮಾತನಾಡಿ, ಸದನದ ಒಳಗೆ ಆರ್.ಅಶೋಕ್ ಮತ್ತು ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ನುಡಿದಂತೆ ನಡೆದುಕೊಳ್ಳಿ ಎಂದು ಕಾಂಗ್ರೆಸ್‌ನವರಿಗೆ ಮನವರಿಕೆ ಮಾಡಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಒತ್ತಾಯಿಸುತ್ತಿದ್ದೇವೆ ಎಂದರು.












Click it and Unblock the Notifications