ಹನೂರಿನ ಗಂಗನದೊಡ್ಡಿ ಜನರಿಗೆ ರಸ್ತೆಯದೇ ಚಿಂತೆ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ: ಗ್ರಾಮಾಭಿವೃದ್ಧಿ ಆಗಬೇಕಾದರೆ ಮೂಲಸೌಲಭ್ಯಗಳಾದ ರಸ್ತೆ, ನೀರು, ವಿದ್ಯುತ್ ಅಗತ್ಯ. ಆದರೆ ಬಹಳಷ್ಟು ಗ್ರಾಮಗಳಿಗೆ ಸಮರ್ಪಕವಾದ ರಸ್ತೆಗಳಿಲ್ಲ. ಒಂದು ವೇಳೆ ರಸ್ತೆ ಮಾಡಿದರೂ ಅವು ಕಳಪೆ ಕಾಮಗಾರಿಯಿಂದಾಗಿ ಕೆಲವೇ ಸಮಯದಲ್ಲಿ ಸಂಚಾರ ಮಾಡದಂತಹ ಸ್ಥಿತಿಗೆ ಬಂದು ಬಿಡುತ್ತವೆ. ಇದಕ್ಕೆ ಜಿಲ್ಲೆಯ ಹನೂರು ಸಮೀಪದ ಗಂಗನದೊಡ್ಡಿ ಗ್ರಾಮ ಸಾಕ್ಷಿಯಾಗಿದೆ.

ಗಂಗನದೊಡ್ಡಿ ಗ್ರಾಮಕ್ಕೆ ತೆರಳಿದರೆ ಅಲ್ಲಿ ವಾಹನಗಳು ಸಂಚರಿಸುವುದಿರಲಿ ಮನುಷ್ಯನೂ ಹೆಜ್ಜೆ ಹಾಕಲು ಪರದಾಡಬೇಕಾಗುತ್ತದೆ. ಇಲ್ಲಿಯ ಪರಿಸ್ಥಿತಿ ಹಾಗಿದೆ. ಓಬಿರಾಯನ ಕಾಲದಲ್ಲಿ ಮಾಡಿದ್ದ ಡಾಂಬರು ರಸ್ತೆ ಕಿತ್ತುಬಂದಿದೆ. ಅಲ್ಲಲ್ಲಿ ಹೊಂಡಗಳು ಬಿದ್ದಿವೆ. ಇದರಿಂದ ಅತ್ತ ಡಾಂಬರು ಅಲ್ಲದ, ಇತ್ತ ಮಣ್ಣು ರಸ್ತೆಯೂ ಅಲ್ಲದ ರಸ್ತೆಯಾಗಿ ಸಂಚಾರ ಮಾಡುವವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.[ಗುಂಡ್ಲುಪೇಟೆ ಕಡಬೂರು ಗೇಟ್ ಬಳಿ ಸಾರಿಗೆ ಬಸ್ ಪಲ್ಟಿ]

Ganganadoddi worse roads frustrate local people

ಸೂಳೇರಿಪಾಳ್ಳ್ಯ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಗಂಗನದೊಡ್ಡಿ ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲದ ಕಾರಣ ಖಾಸಗಿ ವಾಹನಗಳು ಬರಲು ಹಿಂದೇಟು ಹಾಕುತ್ತಿವೆ. ಹೀಗಿರುವಾಗ ಇನ್ನು ಸಾರಿಗೆ ಬಸ್ ತಾನೆ ಹೇಗೆ ಬರುತ್ತದೆ? ಹೀಗಾಗಿ ಇಲ್ಲಿನ ಗ್ರಾಮಸ್ಥರು ಪಟ್ಟಣಕ್ಕೆ ಬರಬೇಕಾದರೆ ಸುಮಾರು 10 ಕಿ.ಮೀ. ನಡೆಯಲೇಬೇಕು.

ಅದು ಕಾಡಿನ ಹಾದಿಯಾಗಿರುವುದರಿಂದ ಯಾವಾಗ ಬೇಕಾದರೂ ಆನೆಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಭಯದಿಂದ ನಡೆದು ಹೋಗಬೇಕಾಗುತ್ತದೆ. ಇನ್ನು ವಿದ್ಯಾರ್ಥಿಗಳಿಗಂತೂ ಕಷ್ಟವೇ. ಹೆಣ್ಣುಮಕ್ಕಳು ಬಸ್ ವ್ಯವಸ್ಥೆಯಿಲ್ಲದ ಕಾರಣ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ.[ಮುಗಿಯದ ' ಶಿರಾಡಿ' ಗೋಳು, ನಿಲ್ಲದ ಪ್ರಯಾಣಿಕರ ಗೋಳು!]

ಚುನಾವಣೆ ಬಂದಾಗಲೆಲ್ಲ ನಿಮ್ಮ ಊರಿಗೆ ರಸ್ತೆ ಕಲ್ಪಿಸಿಕೊಡುತ್ತೇವೆ ಎಂದು ಭರವಸೆ ನೀಡಿ ಮತ ಗಿಟ್ಟಿಸಿಕೊಳ್ಳುವ ಜನಪ್ರತಿನಿಧಿಗಳು ಬಳಿಕ ಇತ್ತ ಗಮನಹರಿಸುವುದೇ ಇಲ್ಲ. ಹೀಗಾಗಿ ರಸ್ತೆಯಾಗಲೀ ಗ್ರಾಮವಾಗಲೀ ಉದ್ಧಾರವಾಗಿಲ್ಲ.

ಗ್ರಾಮಪಂಚಾಯಿತಿ ನಡೆಸುವ ವಾರ್ಡ್ ಸಭೆ, ಗ್ರಾಮಸಭೆಗಳಲ್ಲಿ ಈ ಬಗ್ಗೆ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ಗ್ರಾಮದ ಜನರಿಗೆ ಸಂಕಷ್ಟ ತಪ್ಪಿಲ್ಲ. ರಸ್ತೆ ದುರಸ್ತಿಪಡಿಸಿ ಬಸ್ ಸೌಲಭ್ಯ ಕಲ್ಪಿಸಿಕೊಡಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಇನ್ನಾದರೂ ಕ್ಷೇತ್ರದ ಶಾಸಕರು, ಗ್ರಾ.ಪಂ ಪ್ರತಿನಿಧಿಗಳು ಇತ್ತ ಗಮನಹರಿಸಿ, ಜನರ ಸಂಕಷ್ಟ ನೀಗಿಸಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ganaganadoddi village roads become worse. People are fustrated by this. This village belongs to Hanur taluk, Chamarajanagar district.
Please Wait while comments are loading...